– ಶೌಕತ್ ಅಲಿ ಮಂಗಳೂರು
1. ನಬಿ ದಿನಾಚರಣೆ ಬಗ್ಗೆ ಸಮುದಾಯದೊಳಗೆ ಮಾಡಬಹುದು ಮಾಡಬಾರದು ಎಂಬ ಗೊಂದಲಗಳು, ಸಮರ್ಥನೆ, ಆರೋಪ ಪತ್ಯಾರೋಪಗಳು, ಪ್ರಶ್ನೆಗಳು ಹೆಚ್ಚು ಹೆಚ್ಚು ವ್ಯಾಪಕ ಆಗುತ್ತಿದೆ.
ಪ್ರವಾದಿ ಮುಹಮ್ಮದ್ ನಮ್ಮ ಒಂದು ದಿನದ ಒಂದು ತಿಂಗಳ ವ್ಯಕ್ತಿತ್ವ ಅಲ್ಲ. ಅವರು ನಮ್ಮ ಜೀವ ನಾಡಿ ಉಸಿರಿನಂತೆ ಜೀವನದಲ್ಲಿ ಪಾಲಿಸಬೇಕಾದ ವ್ಯಕ್ತಿತ್ವ ಆಗಿದೆ.
ಆ ವ್ಯಕ್ತಿತ್ವಕ್ಕೆ ಯಾರ ಅವಲಂಬನೆಯ ಅಗತ್ಯವಿಲ್ಲ. ಅಗತ್ಯವಿಲ್ಲದಷ್ಟು ಎತ್ತರಕ್ಕೆ ಔನ್ನತ್ಯಕ್ಕೆ ಅಲ್ಲಾಹನು ಅವರ ಸ್ಥಾನವನ್ನು ಏರಿಸಿದ್ದಾನೆ. ದಿನದ ಐದು ಹೊತ್ತಿನ ಅಝಾನ್ ನಲ್ಲಿ ಅವರನ್ನು ಹತ್ತು ಬಾರಿ ಲೋಕಾಂತ್ಯದ ಜನರು ಸ್ಮರಿಸುವ ವ್ಯವಸ್ಥೆ ಅಲ್ಲಾಹನು ಮಾಡಿದ್ದಾನೆ. ಕಡ್ಡಾಯ ನಮಾಝ್ ಸುನ್ನತ್ ನಮಾಝ್ನಲ್ಲಿ ಅವರನ್ನು ಸ್ಮರಿಸದವರಿಲ್ಲ. ಅವರ ಮೇಲೆ ಅಲ್ಲಾಹನು ಅಸಂಖ್ಯಾತ ದೇವಚರರು ಸ್ವಸ್ತಿ ವಚನ ಹೇಳುತ್ತಿದ್ದಾರೆ ನಮಗೂ ವರ್ಷಂಪೂರ್ತಿ ಹೇಳಲು ಆಜ್ಞಾಪಿಸಲಾಗಿದೆ.
2. ಯಾವುದೇ ವ್ಯಕ್ತಿತ್ವದ ಮೇಲಿನ ಭಾವನಾತ್ಮಕ ಸಂಬಂಧವು ಅವರ ಸ್ಮರಣೆಯನ್ನು ವಿಶೇಷವಾಗಿ ಆಚರಿಸಲು ಮನುಷ್ಯನ ಪ್ರಕೃತಿ ಬಯಸುತ್ತದೆ. ಅದರಂತೆ ಈಸಾರ ಜನ್ಮ ದಿನವನ್ನು ಕ್ರೈಸ್ತರು ಆಚರಿಸುತ್ತಾರೆ, ಗಾಂಧೀಜಿಯವರ ಜನ್ಮದಿನ, ಟಿಪ್ಪು ಜನ್ಮದಿನ, ಅಂಬೇಡ್ಕರ್ ಜನ್ಮ ದಿನ, ಜಿನ್ನಾರ ಜನ್ಮದಿನ, ಕಿಂಗ್ ಫೈಸಲ್ ಜನ್ಮದಿನ, ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಇಂತಹ ಆಚರಣಾಸಂಸ್ಕೃತಿ ಒಂದು ಸಮುದಾಯದವರಿಗೆ ಸೀಮಿತ ಅಲ್ಲ. ಮನುಷ್ಯ ಪ್ರಕೃತಿ ಇದರಲ್ಲಿ ಒಳಗೊಂಡ ಕಾರಣ ಇದು ಅಸ್ತಿತ್ವಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಅವರ ಸಾಧನೆ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ಅವರನ್ನು ಮತ್ತಷ್ಟು ಪ್ರಸ್ತುತಗೊಳಿಸಲಾಗುತ್ತದೆ. ಅದನ್ನು ಅದೇ ನೆಲೆಯಲ್ಲಿ ನೋಡಬಹುದಾಗಿದೆ.
3. ನಬಿ ದಿನಾಚರಣೆ ಪ್ರವಾದಿಯ ಕಾಲದಲ್ಲಿ ಇರಲಿಲ್ಲ..ಆ ಬಳಿಕದ ಸುಮಾರು 600 ವರ್ಷಗಳ ವರಗೆ ಸೆಲೆಬ್ರೇಶನ್ ಇರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ.
ಅಂದ ಮಾತ್ರಕ್ಕೆ ಅವುಗಳನ್ನು ಧಾರ್ಮಿಕವಾಗಿ ವಿಮರ್ಶೆ ಮಾಡುವುದು ಸರಿಯಲ್ಲ.
ಪ್ರವಾದಿ (ಸ) ಕಾಲದಲ್ಲಿ ಸಂಘಟನೆ ಇರಲಿಲ್ಲ. ಸಂಘಟನಾ ಸಮ್ಮೇಳನ, ವಾದ ಪ್ರತಿವಾದ, ಸಂಸ್ಥೆಗಳ ವಾರ್ಷಿಕೋತ್ಸವ, ಸಂಘಟನಾ ಎಗ್ಸಿಬಿಷನ್ ಗಳು, ಇಸ್ಲಾಮೀ ವಾರ ಪಾಕ್ಷಿಕ ಮಾಸಿಕ ಪತ್ರಿಕೆಗಳೆಲ್ಲವೂ ಇರಲಿಲ್ಲ. ಪ್ರತಿಭಟನೆ, ಬ್ಯಾಲೆಟ್ ಓಟು, ಹಾಲ್ ಗಳಲ್ಲಿ ಮದುವೆ ಹೀಗೆ ಆಯ್ತು ಧಾರ್ಮಿಕ ವಿಧಿಯಾದ ಜುಮಾ ಖುತ್ಬಾ ಸ್ಥಳೀಯ ಭಾಷೆಯಲ್ಲಿ ಇತ್ತೇ? ಉದಾಹರಣೆ ನೀಡಬಹುದು.
ಆ ಕಾಲದಲ್ಲಿ ನಬಿ ದಿನಾಚರಣೆ ಅಥವಾ ಇತರ ರೀತಿಯ ಸೃಜನಶೀಲ ಸೆಲೆಬ್ರೇಶನ್ ಗಳು ಯಾರೂ ಯಾವ ಸಮುದಾಯದವರೂ ಮಾಡುತ್ತಿರಲಿಲ್ಲ. ಅಂತಹ ಸಂಸ್ಕೃತಿ ಆಲೋಚನೆಯೇ ಸಮಾಜದಲ್ಲಿ ಇರಲಿಲ್ಲ.
ಅಧಿಕಾರ ಇರುವ ಖಲೀಫರು ಮುಂಜಾಗ್ರತೆಗಾಗಿ ಕೆಲವುಗಳನ್ನು ಮಾಡುತ್ತಿರಲಿಲ್ಲ ಅಥವಾ ಅವುಗಳನ್ನು ಸರಿಪಡಿಸುತ್ತಿದ್ದರು. ಅದು ಅವರ ಸಾಮರ್ಥ್ಯವೂ ಆಗಿತ್ತು ಮತ್ತು ಸಮುದಾಯವನ್ನು ಆ ನಿಟ್ಟಿನಲ್ಲಿ ಅವರು ಎಜುಕೇಟ್ ಮಾಡುತ್ತಿದ್ದರು.
4. ಇನ್ನು ನಬಿ ದಿನಾಚರಣೆ ಅಥವಾ ಸೆಲೆಬ್ರೇಶನ್ ಎಲ್ಲರೂ ಎಲ್ಲ ಸಂಘಟನೆಯವರೂ ಮಾಡುತ್ತಾರೆ.
ಕೆಲವರು ಸೀರತ್ ಅಭಿಯಾನ ಮಾಡುತ್ತಾರೆ, ಕೆಲವರು ಸೀರತ್ ವಿಚಾರಗೋಷ್ಠಿ, ಸೀರತ್ ಪ್ರಯುಕ್ತ ತಮ್ಮ ಸಂಘಟನಾ ಮಾಗಝಿನ್ ಪತ್ರಿಕೆಗಳನ್ನು ಕಲರ್ ಫುಲ್ ಮಲ್ಟಿ ಕಲರ್ ಮಾಡಿ ಹೊರ ತರುತ್ತಾರೆ. ಮಕ್ಕಳಿಗೆ ಪ್ರಬಂಧ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ವಿವಿಧ ಧರ್ಮೀಯರನ್ನು ಕರೆದು ಸೀರತ್ ದಾವಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇದೆಲ್ಲವೂ ಒಂದು ರೀತಿಯಲ್ಲಿ ಸೆಲೆಬ್ರೇಶನ್ ಆಗಿದೆ. ಆದರೆ ಅದರ ರೀತಿಗಳು ಬದಲಾಗಿದೆ.
ಆದ್ದರಿಂದ ನಬಿ ದಿನಾಚರಣೆ ಉಮ್ಮತ್ ಒಡಕಿನ ಕಾರಣ ಆಗಬಾರದು. ಇದನ್ನು ಮಾಡದವವರು ಮಾಡುವವರೂ ಇದರ ಶೈಲಿಯ ಬಗ್ಗೆ ಜಾಗೃತಿ ಮೂಡಿಸಬೇಕು. ಪರಸ್ಪರ ಕೆಸೆರೆರೆಚಾಟ ಸರಿಯಲ್ಲ. ಈ ಹೆಸರಿನಲ್ಲಿ ನಿಂದನೆ ಗೇಲಿ ಆರೋಪ ಮತ್ತು ಅನೈಕ್ಯ ಒಡಕಿಗೆ ಕಾರಣವಾಗುವ ಪ್ರಕ್ರಿಯೆಗಳು ನಡೆಯಬಾರದು. ಇದನ್ನು ಇಸ್ಲಾಂ ಪ್ರಬಲವಾಗಿ ಖಂಡಿಸುತ್ತದೆ.
ಪ್ರವಾದಿ ಸ ಹುಟ್ಟಿದ್ದು ಅನ್ಯ ಸಮುದಾಯದ ನಿದ್ದೆಗೆಡಿಸಲು, ಟ್ರಾಫಿಕ್ ಜಾಮ್ ಮಾಡಲು, ಬೊಬ್ಬೆ ಹಾಕಲು, ದುಂದುವೆಚ್ಚ ಮಾಡಲು ಎಂದು ಇತರ ಜನರು ತಿಳಿಯುವಂತಾಗಬಾರದು. ಬದಲಾಗಿ ಸಭ್ಯತೆಯಿಂದ, ಶುಚಿತ್ವವನ್ನು ಪಾಲಿಸಿ ಮೆರವಣಿಗೆ, ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಬೇಕು.
ಪ್ರವಾದಿ ಸ ತಮ್ಮ ಹುಟ್ಟಿದ ದಿನದಂದು ಉಪವಾಸ ಹಿಡಿಯುತ್ತಿದ್ದರು. ನಾವು ನಮ್ಮ ಹುಟ್ಟಿದ ದಿವಸ ಉಪವಾಸ ಹಿಡಿಯಬಹುದು ಅಥವಾ ಹಿಡಿಯದೇ ಇರಬಹುದು. ಅದು ಕಡ್ಡಾಯವೇನಲ್ಲ.. ಹುಟ್ಟಿನ ಸೆಲೆಬ್ರೇಶನ್ ಅಕೀಕ ಮಾಡಿ ಜನರಿಗೆ ಉಣಿಸಲು ಬಡಜನರಿಗೆ ದಾನ ಮಾಡಲು ಪ್ರೇರೇಪಿಸಿದ್ದಾರೆ.
ಪ್ರವಾದಿ ಸ ಜನ್ಮದಿನ ಮತ್ತು ತಿಂಗಳು ಹೀಗೆ ಸಕಾರಾತ್ಮಕ ಕೆಲಸಗಳಿಗೆ ವಿನಿಯೋಗ ಆಗಬೇಕು. ಪ್ರವಾದಿ ಸ ರವರನ್ನು ದೇವತ್ವಕ್ಕೇರಿಸುವ ಪ್ರಕ್ರಿಯೆಗಳಿಂದ ಜಾಗರೂಕರಾಗಿರಬೇಕು. ವರ್ಜಿಸಬೇಕು ಅಥವಾ ಶುದ್ದೀಕರಿಸಬೇಕು. ಇದರಲ್ಲಿ ಖುತ್ಬಾ ಆಗಲೀ, ಮೀಲಾದ್ ನಮಾಝ್ ಆಗಲೀ, ಅಥವಾ ಕಡ್ಡಾಯ ಬಲಿ ಕರ್ಮವಾಗಲೀ ಇಲ್ಲ..ಆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಇದೆ…ಇದನ್ನು ಸಾಮಾಜಿಕ ಮತ್ತು ನೈತಿಕ ಪರಿಧಿಯೊಳಗೆ ಮಾನವನಿಗೆ ದೇವರು ನೀಡಿದ ಸ್ವಾತಂತ್ರ್ಯದ ಮಿತಿಯಲ್ಲಿ ಆಚರಿಸಬೇಕು.
ಬಹುಸಂಸ್ಕೃತಿ ದೇಶದಲ್ಲಿ ಪ್ರವಾದಿ ಮುಹಮ್ಮದ್ ಕುರಿತ ತಪ್ಪುಕಲ್ಪನೆಗಳನ್ನು ದೂರೀಕರಿಸಲು, ರಹ್ಮತುಲ್ಲಿಲ್ ಆಲಮೀನ್ ಆಗಿ ಜನರಿಗೆ ಮನವರಿಕೆ ಮಾಡಿಸಲು ಈ ತಿಂಗಳನ್ನು ಸದ್ಬಳಕೆ ಮಾಡಬೇಕು.
ಪ್ರವಾದಿ ಸ ರವರನ್ನು ಎಲ್ಲಕ್ಕಿಂತ ಪ್ರೀತಿಸಬೇಕು ಎಂಬುದು ಕುರಾನ್ ಮತ್ತು ಹದೀಸಿನ ಸ್ಪಷ್ಟ ಆದೇಶ. ಸ್ಪಷ್ಟ ಧೋರಣೆ.ಇನ್ನು ಪ್ರೀತಿ ಹೇಗೆ ಪ್ರಕಟ ಪಡಿಸಬೇಕು ಎಂಬುದು ಕಾರ್ಯಕ್ರಮದ ಭಾಗ.
ಕಾರ್ಯಕ್ರಮಗಳು ಅದು ಮನುಷ್ಯನಿಂದ ಮನುಷ್ಯನಿಗೆ ವ್ಯತ್ಯಸ್ಥವಾಗಿರುತ್ತದೆ. ಭಾವನೆಗಳಿಂದ ಭಾವನೆಗಳಿಗೆ ಭಿನ್ನವಾಗಿರುತ್ತದೆ. ಕಾಲದಿಂದ ಕಾಲಕ್ಕೆ ಭಿನ್ನವಾಗಿರುತ್ತದೆ. ಇನ್ನು ಪ್ರೀತಿ ಒಂದು ದಿನ ವಿಶೇಷವಾಗಿ ತೋರ್ಪಡಿಸುವುದು, ವರ್ಷದ ಒಂದು ತಿಂಗಳಲ್ಲಿ ತೋರ್ಪಡಿಸುವುದು, ದಿನಾ ಜೀವನ ಪೂರ್ಣ ತೋರ್ಪಡಿಸುವುದು ಅವರವರಿಗೆ ಬಿಟ್ಟದ್ದು.
ಇದರಲ್ಲಿ ಯಾವುದೇ ಶಿರ್ಕ್ ಅಥವಾ ಕುಫ್ರ್ ಇಲ್ಲ. ಇದರ ಉದ್ದೇಶ ಕೇವಲ ಮುಹಬ್ಬತ್ ಹುಬ್ಬ್. ಮನುಷ್ಯನ ಎಲ್ಲಾ ಕರ್ಮಗಳು ಉದ್ದೇಶವನ್ನು ಅವಲಂಬಿಸಿದೆ.ಆದ್ದರಿಂದ ಯಾರು ಒಂದು ದಿನ , ಒಂದು ತಿಂಗಳು ವಿಶೇಷವಾಗಿ ಮಾಡುತ್ತಾರೆ, ಅವರನ್ನು ಆಕ್ಷೇಪಿಸುವುದು ಸರಿಯಲ್ಲ.
ನಮಗೆ ಇಷ್ಟವಿಲ್ಲದಿದ್ದರೆ ನಾವು ಆಚರಿಸದೇ ಇದ್ದರೆ ಆಯ್ತು. ಆಚರಿಸದವರನ್ನೂ ಯಾರೂ ಆಕ್ಷೇಪಿಸಬಾರದು. ಆಕ್ಷೇಪಿಸುವುದಿಲ್ಲ. ಇನ್ನು ಒಂದು ದಿನ ಆಚರಿಸುವವರು ಜೀವನಪೂರ್ತಿ ಪ್ರವಾದಿ ಸ ರನ್ನು ನೆನಪಿಸುವುದಿಲ್ಲ ಎಂಬುದು ದೊಡ್ಡ ಸುಳ್ಳಾರೋಪ.