ಬೈಕಿಗೆ ಢಿಕ್ಕಿ ಹೊಡೆದ ಕಾರು; ಸಹೋದರ, ಸಹೋದರಿಯರು ಸೇರಿ ಮೂವರು ಮೃತ್ಯು

ಬೈಕಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸಹೋದರ ಹಾಗೂ ಇಬ್ಬರು ಸಹೋದರಿಯರು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಶುಕ್ರವಾರ (ಏ.12 ರಂದು) ಪರಿ ಚೌಕ್ ರಸ್ತೆಯಲ್ಲಿ ಮಧ್ಯರಾತ್ರಿ 2:30 ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಸುರೇಂದ್ರ ಸಿಂಗ್ (28) ಅವರ ಸಹೋದರಿ ಶೈಲಿ (26) ಅಂಶು (14) ಮೃತ ದುರ್ಧೈವಿಗಳು. ಅಂಶು ಅವರ ಸ್ನೇಹಿತೆ ಸಿಮ್ಮಿ  ಗಂಭೀರ ಗಾಯಗೊಂಡಿದ್ದಾರೆ.

ಸುರೇಂದ್ರ ಸಿಂಗ್ ಸೇರಿದಂತೆ ನಾಲ್ವರು ತಮ್ಮ ಸ್ಪ್ಲೆಂಡರ್ ಬೈಕ್‌ನಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಾಸಾಗುತ್ತಿದ್ದರು. ಈ ವೇಳೆ ಅಪರಿಚಿತ ಕಾರೊಂದು ಅವರ ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕುರುಳಿದವರ ಮೇಲೆ ಕಾರು ಹರಿದು ಪರಾರಿ ಆಗಿದೆ.ಸುರೇಂದ್ರ ಹಾಗೂ ಆತನ ಇಬ್ಬರು ಸಹೋದರಿಯರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಿಮ್ಮಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ನೋಯ್ಡಾದ ಕುಲೇಸರ ಎಂಬ ತಮ್ಮ ನಿವಾಸದಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಕಸ್ನಾದಿಂದ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ನಿರ್ಲಕ್ಷ್ಯದ ಚಾಲನೆ), 338 (ನಿರ್ಲಕ್ಷ್ಯದಿಂದ ತೀವ್ರ ನೋವನ್ನುಂಟುಮಾಡುವುದು) ಮತ್ತು 304A (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Latest Indian news

Popular Stories