ಶಿವಮೊಗ್ಗದಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಮೃತ್ಯು

ಶಿವಮೊಗ್ಗ: ಶಿವಮೊಗ್ಗದಲ್ಲಿ ಶನಿವಾರ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ, ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಟ್ರೀ ಪಾರ್ಕ್ ನ ಲಯನ್ ಸಫಾರಿ ಬಳಿ ದುರ್ಘಟನೆ ಸಂಭವಿಸಿದೆ.

ಶಿವಮೊಗ್ಗದಿಂದ ಸಾಗರ ಕಡೆ ತೆರಳುತ್ತಿದ್ದ ಇನೋವಾ ಕಾರು ಹಾಗೂ ಸಾಗರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಎರಡು ಕಾರುಗಳು ತೀವ್ರ ಛಿದ್ರಗೊಂಡಿವೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಐವರಿಗೆ ಗಾಯಗಳಾಗಿವೆ.

ಮೃತರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದವರಾಗಿದ್ದು, ಶಿವಮೊಗ್ಗದ ಸಿಗಂದೂರಿನಿಂದ ವಾಪಸ್ಸಾಗುತ್ತಿದ್ದರು.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಾರುಗಳ ಭಾಗಗಳನ್ನು ತೆರವು ಮಾಡಲಾಗಿದೆ. ಅತಿ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Latest Indian news

Popular Stories