ಬೆಳಗಾವಿ: ಬೆಳಗಾವಿ-ಬೈಲಹೊಂಗಲ ಹೆದ್ದಾರಿಯ ಭರತೇಶ್ ಶಾಲೆಯ ಬಳಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಅದೃಷ್ಟವಶಾತ್, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬೆಳಗಾವಿ ತಾಲ್ಲೂಕಿನ ದೇಸೂರಿನಿಂದ ಬೈಲಹೊಂಗಲದ ಕಡೆ ಹೊರಟಿದ್ದ ಟ್ಯಾಂಕರ್ (ಕೆಎ-23 ಎ 8171) ವೇಗವಾಗಿ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದು, ಹೆದ್ದಾರಿಯ ಮತ್ತೊಂದು ಬದಿಗೆ ಹೋಗಿಬಿದ್ದಿದೆ. ಘಟನೆಯಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಮಣ್ಣು ಪಾಲಾಗಿದೆ.
ಈ ನಡುವೆ ವಿಚಾರ ತಿಳಿಯುತ್ತಿದ್ದಂತೆಯೇ ಸೋರಿಕೆಯಾದ ಪೆಟ್ರೋಲ್ ಅನ್ನು ಸಂಗ್ರಹಿಸಲು ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಆತಂಕಕರ ವಾತಾವರಣ ಸೃಷ್ಟಿ ಮಾಡಿದರು. ಬಳಿಕ ಪಿಎಸ್ಐ ಅವಿನಾಶ್ ಯರಗೊಪ್ಪ ನೇತೃತ್ವದ ಹಿರೇ ಬಾಗೇವಾಡಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿ, ಜನರನ್ನು ಚದುರಿಸಿದರು.
ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಯಲು ಅಗ್ನಿಶಾಮಕ ದಳದವರು ರಾಸಾಯನಿಕ ಮಿಶ್ರಿತ ನೀರನ್ನು ಸಿಂಪಡಿಸಿದರು. ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಯಿತು.
ಈ ನಡುವೆ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಎದುರಾಗಿತ್ತು. ಬಹಳಿಕ ಪೊಲೀಸರು ವಾಹನಗಳನ್ನು ಸರ್ವಿಸ್ ರಸ್ತೆಗೆ ತಿರುಗಿಸಿ ಕ್ರೇನ್ ಬಳಸಿ ಟ್ಯಾಂಕರ್ ಅನ್ನು ತೆರವುಗೊಳಿಸಿದರು.
ಪೊಲೀಸ್ ಆಯುಕ್ತ ಇಯಾಡಾ ಮಾರ್ಟಿನ್ ಮಾರ್ಬನಿಯಾಂಗ್ ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರ ತುರ್ತು ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. ಇದೇ ವೇಳೆ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಘಟನೆಯಲ್ಲಿ ಟ್ಯಾಂಕರ್ ಚಲಾಯಿಸುತ್ತಿದ್ದ ಚಾಲಕನಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಹಿರೇಬಾಗೇವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.