ಚಿತ್ರದುರ್ಗ: ಕಾರಿಗೆ ಲಾರಿ ಡಿಕ್ಕಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತ್ಯು; ಮೂವರಿಗೆ ಗಂಭೀರ ಗಾಯ

ಚಿತ್ರದುರ್ಗ: ನ್ಯಾಷನಲ್​ ಹೈವೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಂದ ಲಾರಿಯೊಂದು ರಭಸದಿಂದ ಗುದ್ದಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನ ತಣಿಸಂದ್ರ ಮೂಲದ ಪ್ರಜ್ವಲ್ ರೆಡ್ಡಿ(30), ಹರ್ಷಿತಾ(28), ಮೋಹನ್ (2), ವಿಜಯರೆಡ್ಡಿ ಮೃತ ದುರ್ದೈವಿಗಳು. ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರು ಮತ್ತು ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದಾರೆ.

ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಇರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಶನಿವಾರವಾಗಿದ್ದ ಕಾರಣ ಮುಂಜಾನೆ ತಮ್ಮ ಪ್ರಯಾಣ ಆರಂಭಿಸಿರಬಹುದು ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುವ ವೇಳೆ ಚಿಕ್ಕಬೆನ್ನೂರು ಗ್ರಾಮದ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.

Latest Indian news

Popular Stories