ಕಡಬ: ಜಾನುವಾರು ಸಾಗಾಟದ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು: ಆಕ್ರೋಶಿತರಿಂದ ಹೆದ್ದಾರಿ ತಡೆದು ಪ್ರತಿಭಟನೆ

ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಜಾನುವಾರು ಸಾಗಾಟದ ವಾಹನ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಮರ್ದಾಳ ಜಂಕ್ಷನ್ ನಲ್ಲಿ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಡ ರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.


ಮೃತರನ್ನು ವಿಠ್ಠಲ ರೈ ಎಂದು ಗುರುತಿಸಲಾಗಿದ್ದು, ಸುಬ್ರಹ್ಮಣ್ಯ ದಿಂದ ಕಡಬಕ್ಕೆ ಹೋಗುತ್ತಿದ್ದ ಮಾರುತಿ 800 ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ.
ಇದರಿಂದ ಆಕ್ರೋಶ ಗೊಂಡ ಸಾರ್ವಜನಿಕರು ಮೃತದೇಹ ಇದ್ದ ಸರಕಾರಿ ಆಸ್ಪತ್ರೆ ಮುಂದೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.


ಬಳಿಕ ಮಂಗಳೂರು ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅರುಣ್ ಪುತ್ತಿಲ ಮತ್ತಿತರು ಭಾಗವಹಿಸಿದ್ದರು.


ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿದ್ದು, ಆರೋಪಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Latest Indian news

Popular Stories