ಕುಂದಾಪುರ: ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ಫುಟ್ಬಾತ್ ಇಂಟರ್ ಲಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ಅ.1 ಮಂಗಳವಾರ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ (19) ಎಂದು ಗುರುತಿಸಲಾಗಿದೆ.
ಧನುಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ ಬದಿಯ ಇಂಟರ್ ಲಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ. ಅತೀ ವೇಗವಾಗಿ ಹಿಂದಿನಿಂದ ಬಂದ ಶ್ರೀ ಮಹಾಗಣಪತಿ ಪ್ರಸನ್ನ ಎಂಬ ಹೆಸರಿನ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ತೀರಾ ಬಲಬದಿಗೆ ಬಂದು ಧನುಷ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಧನುಷ್ ಲಾರಿಯಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಧನುಷ್ ತನ್ನ ತಾಯಿಯೊಂದಿಗೆ ನಾಗೂರಿನಲ್ಲಿ ವಾಸಮಾಡುತ್ತಿದ್ದ. ತಂದೆ ಬಾರ್ಕೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಕಾಲೇಜು ಮುಗಿಸಿ ಧನುಷ್ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಕುಂದಾಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.