Accident NewsKUNDAPURA

ಕುಂದಾಪುರ | ಹುಣ್ಸೆಮಕ್ಕಿ; ಟಿಪ್ಪರ್‌ ಲಾರಿ ಚಾಲಕನ ಓವರ್‌ ಟೇಕ್‌ ಅವಾಂತರ

ತೆಕ್ಕಟ್ಟೆ: ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹುಣ್ಸೆಮಕ್ಕಿ – ಹಾಲಾಡಿ ಪ್ರಮುಖ ಸಂಪರ್ಕ ರಸ್ತೆಯ ನ್ಯೂ ಪಾರಿಜಾತ ಹೊಟೇಲ್‌ ಸಮೀಪ ಅತೀ ವೇಗದಿಂದ ಬಂದ ಟಿಪ್ಪರ್‌ ಲಾರಿ ಚಾಲಕ ಎದುರಿನಲ್ಲಿ ಚಲಿಸುತ್ತಿದ್ದ ಈಚರ್‌ ವಾಹನ, ಕಾರು ಹಾಗೂ ಪಿಕಪ್‌ ವಾಹನಕ್ಕೆ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ನ. 12ರಂದು ಬೆಳಗ್ಗೆ 11.50ರ ಸುಮಾರಿಗೆ ಸಂಭವಿಸಿದೆ.

ಹುಣ್ಸೆಮಕ್ಕಿಯಿಂದ ತೆಕ್ಕಟ್ಟೆ ಕಡೆಗೆ ಅತೀ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್‌ ಮೊದಲು ಎದುರಿನಿಂದ ಬರುತ್ತಿದ್ದ ಈಚರ್‌ ವಾಹನಕ್ಕೆ ಢಿಕ್ಕಿ ಹೊಡೆದು ಅನಂತರ ಮುಂಭಾಗದಲ್ಲಿ ಚಲಿಸುತ್ತಿದ್ದ ಸ್ಯಾಂಟ್ರೋ ಝಿಂಗ್‌ ಕಾರಿಗೆ ಢಿಕ್ಕಿ ಹೊಡೆದುಕೊಂಡು ಎಳೆದು ಸಾಗಿದ್ದು, ಅದೇ ಸಂದರ್ಭದಲ್ಲಿ ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಸಾಗುತ್ತಿದ್ದ ಮಾರುತಿ ಸುಜುಕಿ ಸೂಪರ್‌ ಕ್ಯಾರಿ ಪಿಕ್‌ಅಪ್‌ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಹಾಗೂ ಪಿಕಪ್‌ ವಾಹನಗಳು ನಜ್ಜುಗುಜ್ಜಾಗಿದೆ. ಪಿಕಪ್‌ ವಾಹನ ಆಯತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಈ ಸರಣಿ ಅಪಘಾತದಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಟಿಪ್ಪರ್‌ ಚಾಲಕ ಅತಿವೇಗದಿಂದ ಬಂದು ಈಚರ್‌ ಹಾಗೂ ಸ್ಯಾಂಟ್ರೋ ಝಿಂಗ್‌ ಕಾರಿಗೆ ಢಿಕ್ಕಿ ಹೊಡೆದು ಎಳೆದೊಯ್ಯುತ್ತಿರುವ ದೃಶ್ಯ ಇಲ್ಲಿನ ಹೊಟೇಲ್‌ವೊಂದರ ಅಳವಡಿಸಿದ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆಯನ್ನು ತೋರಿಸುತ್ತಿದೆ.

ಅಪಘಾತದಿಂದಾಗಿ ಪ್ರಮುಖ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸಂಚಾರ ಪೊಲೀಸರು ವಾಹನಗಳ‌ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಘಟನೆ ಸಂಭವಿಸುತ್ತಿದ್ದಂತೆ ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button