ನಿಯಂತ್ರಣ ತಪ್ಪಿ ಲಾರಿ ಪಲ್ಟಿ | ಚಾಲಕ, ಕ್ಲೀನರ್‌ ಹಾಗೂ 40 ಜಾನುವಾರು ಸಾವು!

ಹೈದರಾಬಾದ್:‌ ಮಿತಿಮೀರಿದ ವೇಗದಿಂದಾಗಿ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಪರಿಣಾಮ ಲಾರಿ ಚಾಲಕ, ಕ್ಲೀನರ್‌ ಹಾಗೂ 40 ಹಸುಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿರುವುದಾಗಿ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ 44ರ ಕಾಸೆಪಲ್ಲಿ ಟೋಲ್‌ ಪ್ಲಾಜಾ ಸಮೀಪ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಚಾಲಕ ಮತ್ತು ಕ್ಲೀನರ್‌ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ವರದಿ ತಿಳಿಸಿದೆ.

ಹಸುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿದ್ದು, ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ.

ಕ್ರೇನ್‌ ನೆರವಿನಿಂದ ಹಸುಗಳ ಶವಗಳನ್ನು ಮೇಲಕ್ಕೆತ್ತಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿರುವುದಾಗಿ ಪಾಮಿಡಿ ಸರ್ಕಲ್‌ ಇನ್ಸ್‌ ಪೆಕ್ಟರ್‌ ರೋಶನ್‌ ತಿಳಿಸಿದ್ದಾರೆ.

Latest Indian news

Popular Stories