ರಾಮನಗರ | ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ದಂಪತಿ ಮೃತ್ಯು

ರಾಮನಗರ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದ ದಂಪತಿ ಮೃತಪಟ್ಟಿರುವ ಘಟನೆ, ತಾಲ್ಲೂಕಿನ ಅವ್ವೇರಹಳ್ಳಿಯ ಸಬ್ಬಕೆರೆ ಗೇಟ್ ಬಳಿ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.

ಮಾಗಡಿ ತಾಲ್ಲೂಕಿನ ಹೊನ್ನಾಪುರಪಾಳ್ಯದ ರವಿಕುಮಾರ್ (50) ಮತ್ತು ಲಕ್ಷ್ಮಮ್ಮ (46) ಮೃತರು.

ರವಿಕುಮಾರ್ ಅವರು ಪತ್ನಿಯೊಂದಿಗೆ ಕನಕಪುರದಲ್ಲಿರುವ ಮಗಳ ಮನೆಗೆ ಹೋಗಿ ಊರಿಗೆ ವಾಪಸ್ಸಾಗುತ್ತಿದ್ದರು. ಬಸ್ ರಾಮನಗರದಿಂದ ಕನಕಪುರಕ್ಕೆ ಹೋಗುತ್ತಿತ್ತು. ಸಬ್ಬಕೆರೆ ಗೇಟ್ ಬಳಿಯ ಕೆರೆಯ ತಿರುವಿನಲ್ಲಿ ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ಬಸ್‌ನ ಮುಂಭಾಗದ ಚಕ್ರದಗಿ ಸಿಲುಕಿದರು. ಇಬ್ಬರಿಗೂ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದರು.

ವಿಷಯ ತಿಳಿದು ಸ್ಥಳಕ್ಕೆ ತೆರಳಿ ಇಬ್ಬರ ಶವಗಳನ್ನು ಆಂಬುಲೆನ್ಸ್‌ನಲ್ಲಿ ರಾಮನಗರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶವಗಳನ್ನು ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು

Latest Indian news

Popular Stories