ಉಡುಪಿ, ದ.ಕ | ರಸ್ತೆ ಅಪಘಾತಕ್ಕೆ 2 ವರ್ಷಗಳಲ್ಲಿ 1,113 ಮಂದಿ ಮೃತ್ಯು !

ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸಾವಿರ ದಾಟಿದೆ !

ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷದಲ್ಲಿ 498 ಮಂದಿ ಮೃತಪಟ್ಟಿದ್ದಾರೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ 615 ಮಂದಿ ಮೃತಪಟ್ಟಿದ್ದಾರೆ. ಈ ಎರಡು ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಅಪಘಾತಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 1,113. ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 2,922 ಮಂದಿ ಹಾಗೂ ದ.ಕ. ಜಿಲ್ಲೆಯಲ್ಲಿ 2,716 ಮಂದಿ ಗಾಯಗೊಂಡಿದ್ದಾರೆ.

ಕಮಿಷನರೆಟ್‌ ವ್ಯಾಪ್ತಿಯಲ್ಲಿ 2022ರಲ್ಲಿ 160 ಮತ್ತು 2023ರಲ್ಲಿ 165 ಮಂದಿ, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2022ರಲ್ಲಿ 156 ಹಾಗೂ 2023ರಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಯಲ್ಲಿ 2022ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 5 ಮಂದಿ, 2023ರಲ್ಲಿ 9 ಮಂದಿ, 18ರಿಂದ 25 ವರ್ಷ ವಯಸ್ಸಿನ 28 ಮಂದಿ, 2023ರಲ್ಲಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2022 ಮತ್ತು 2023ರಲ್ಲಿ 18 ವಷಕ್ಕಿಂತ ಕೆಳಗಿನ 5 ಮಂದಿ, 18ರಿಂದ 25 ವರ್ಷ ವಯಸ್ಸಿನ 61 ಮಂದಿ ಮೃತಪಟ್ಟಿದ್ದಾರೆ.

ದ.ಕ. ಜಿಲ್ಲೆಯಲ್ಲಿ 2024ರ ಎರಡೂವರೆ ತಿಂಗಳಲ್ಲಿ ಒಟ್ಟು 66 ಮಂದಿ ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ. ಜ. 1ರಿಂದ ಮಾ. 5ರ ವರೆಗೆ ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 37 ಮಂದಿ ಮೃತಪಟ್ಟರೆ, ಮೂಡುಬಿದಿರೆ, ಉಳ್ಳಾಲ ಸೇರಿದಂತೆ ಮಂಗಳೂರು ಪೊಲೀಸ್‌ ಕಮಿಷನ ರೆಟ್‌ ವ್ಯಾಪ್ತಿಯಲ್ಲಿ 29 ಮಂದಿ ಮೃತಪಟ್ಟಿದ್ದಾರೆ ಎನ್ನುತ್ತವೆ ಪೊಲೀಸ್‌ ಇಲಾಖೆಯ ದಾಖಲೆಗಳು.

ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಮೃತಪಡುತ್ತಿರುವವರ ಪೈಕಿ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಹೆಚ್ಚುತ್ತಿದೆ. ನಿರ್ಲಕ್ಷ್ಯವೇ ಪ್ರಮುಖ ಕಾರಣ. ದ್ವಿಮುಖ (ಸಿಂಗಲ್‌ ರೋಡ್‌) ರಸ್ತೆಗಳಲ್ಲಿ ಓವರ್‌ಟೇಕ್‌ ನಿಂದ ಕೂಡ ಅಪಘಾತಗಳು ಸಂಭವಿಸಿವೆ. ಪಾದಚಾರಿಗಳು ಕೂಡ ಜೀವ ಕಳೆದುಕೊಳ್ಳುತ್ತಿ ದ್ದಾರೆ. ರಸ್ತೆ ಅವ್ಯವಸ್ಥೆ, ಪಾದಚಾರಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಕೂಡ ಕಾರಣ. ­ರಸ್ತೆ ಅಪಘಾತಗಳನ್ನು ಕೂಡ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿದ್ದು ಪದೇಪದೆ ಅಪಘಾತ ಸಂಭವಿಸುತ್ತಿರುವ ಸ್ಥಳ(ಬ್ಲ್ಯಾಕ್‌ ಸ್ಪಾಟ್‌) ಗುರುತಿಸಿ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಿಳಿಸಲಾಗಿದೆ. ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಇತ್ತೀಚೆಗೆ ವರದಿ ಸಲ್ಲಿಸಲಾಗಿದ್ದು ಒಂದು ತಿಂಗಳೊಳಗೆ ಸರಿಪಡಿಸುವ ಭರವಸೆ ನೀಡಿದ್ದಾರೆ. ರಸ್ತೆ ಸಂಚಾರ ನಿಯಮ ಉಲ್ಲಂಘನೆ ಕಂಡು ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಜಾಗ್ರತೆ, ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸ ದಂತೆ ಪ್ರತಿಯೋರ್ವರು ಎಚ್ಚರ ವಹಿಸಬೇಕು. – ಸಿ.ಬಿ. ರಿಷ್ಯಂತ್‌, ಡಾ| ಕೆ. ಅರುಣ್‌ ದ.ಕ., ಉಡುಪಿ ಪೊಲೀಸ್‌ ಅಧೀಕ್ಷಕರು

Latest Indian news

Popular Stories