ಉಡುಪಿಯ ಸಂತೆಕಟ್ಟೆ ಸಮೀಪದ ಆಶೀರ್ವಾದ ಜಂಕ್ಷನ್ ಬಳಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಮಹೀಂದ್ರಾ ಪಿಕಪ್ ಮತ್ತು ಅಟೋರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಅಟೋರಿಕ್ಷಾ ಚಾಲಕನ ತಲೆ ಹಾಗೂ ಕೈ ಕಾಲುಗಳಿಗೆ ಪೆಟ್ಟಾಗಿ ತೀವ್ರತರ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆ ನಡೆದು ಕೆಲ ಹೊತ್ತಾದರೂ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಂದಿಲ್ಲ. ಅದೇ ದಾರಿಯಾಗಿ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಮಲ್ಪೆಯ ಬ್ರದರ್ಸ್ ಟೂರಿಸ್ಟ್ (TMT) ಬಸ್ಸು ಚಾಲಕ ಬುರ್ಹಾನ್ ಮಲ್ಪೆ ಹಾಗೂ ನವೀನ್ ಹನುಮಾನ್ ನಗರ ಬಸ್ಸನ್ನು ನಿಲ್ಲಿಸಿ ವಿಚಾರಿಸಿದರು.
ಪ್ರಜ್ಞಾಹೀನನಾಗಿ , ರಕ್ತಸಿಕ್ತವಾಗಿ ಬಿದ್ದಿದ್ದ ಗಾಯಾಳುವನ್ನು ಕಂಡು ಗಾಬರಿಗೊಂಡು ತಕ್ಷಣ ತಮ್ಮ ಟೂರಿಸ್ಟ್ ಬಸ್ ನ ಮುಖಾಂತರ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಒಳಗಡೆ ಬಸ್ಸನ್ನೇ ಕೊಂಡುಹೋಗಿ ಗಾಯಾಳುವನ್ನು ದಾಖಲಿಸುವ ಮೂಲಕ ಮಾನವೀಯತೆ ಮೆರೆದರು.