ಅಧಿಕಾರಕ್ಕಾಗಿ ಪಕ್ಷ ಪಕ್ಷದ ಅಡ್ಡಾಡಿಲ್ಲ; ಚರಂತಿಮಠ

ಬಾಗಲಕೋಟೆ: ಪಕ್ಷದ ಕಾರ್ಯಕರ್ತರಿಗೆ ನನ್ನ ಕಾಲಾವಧಿಯಲ್ಲೇ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು, ಇತರರ ಕಾಲದಲ್ಲಿ ಗುತ್ತಿಗೆದಾರರನ್ನು ಬಿಟ್ಟು ನಿಜವಾದ ಕಾರ್ಯಕರ್ತರಿಗೆ ಯಾವ ಅವಕಾಶಗಳೂ ಇರಲಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.


ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಕಾರ್ಯಕರ್ತರಿಗೆ ಮುಕ್ತ ಅವಕಾಶ ಮತ್ತು ಸ್ಥಾನ ಮಾನಗಳು ಸಿಕ್ಕಿವೆ. ಸರ್ವಾಧಿಕಾರದ ಪ್ರಶ್ನೆಯೇ ಇಲ್ಲ. ಬಾಗಲಕೋಟೆ ನಗರಸಭೆ, ಬಿಟಿಡಿಎ, ಬೂಡಾ ಸೇರಿದಂತೆ ನಿಗಮ, ಮಂಡಳಿಗಳಲ್ಲಿ ಅಧಿಕಾರ ಸಿಕ್ಕಿವೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಅವಕಾಶಗಳು ಸಿಕ್ಕಾಗ ಯಾರು ಸರ್ವಾಧಿಕಾರಿ ಎನ್ನುವುದನ್ನು ಕಾರ್ಯಕರ್ತರು ನಿರ್ಧರಿಸಲಿದ್ದಾರೆ ಎಂದರು.


ಬಹಳ ಗೌರವದಿಂದ ನಾನು ಬಿಜೆಪಿ ಸೇರಿ ರಾಜಕಾರಣ ಮಾಡುತ್ತ ಬಂದಿರುವೆ. ಅವಕಾಶವಾದಿ ರಾಜಕಾರಣ ಮಾಡಿಲ್ಲ. ಅಧಿಕಾರಕ್ಕಾಗಿ ಪಕ್ಷ ಪಕ್ಷದ ಅಡ್ಡಾಡಿಲ್ಲ ಎಂದರು.


ವಿಧಾನಸಭೆ ಚುನಾವಣೆಯಲ್ಲಿ ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎನ್ನುವ ಪಿ.ಎಚ್. ಪೂಜಾರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚರಂತಿಮಠ ಅವರು ಪೂಜಾರ ಬೆಂಬಲಿಗರು ಯಾರ ಪರ ಬಹಿರಂಗ ಚುನಾವಣೆ ಪ್ರಚಾರ ಮಾಡಿದ್ದಾರೆ. ಯಾರಿಗೆ ಮತ ಹಾಕಿದ್ದಾರೆ ಎನ್ನುವುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಯಲ್ಲಿ ನಾವು ಪಕ್ಷದ ಅಭ್ಯರ್ಥಿ ಪರ ಚುನಾವಣೆ ಮಾಡಿದ್ದೇವೆ ಎನ್ನುವ ಬಗ್ಗೆ ನಮ್ಮ ಕಾರ್ಯಕರ್ತರು ತುಳಸಿಗಿರಿಗೆ ತೆರಳಿ ಆಂಜನೇಯನ ಮುಂದೆ ಆಣೆ ಪ್ರಮಾಣ‌ ಮಾಡಿದ್ದಾರೆ. ಸವಾಲು ಹಾಕಿದವರು ಸಮೀಪ ಸುಳಿದಿಲ್ಲ.
ಪಕ್ಷ ನನಗೆ ಟಿಕೆಟ್ ನೀಡಿದಾಗ ಸಮಾಧಾನದಿಂದ ಇದ್ದು, ನಮ್ಮ ಪರ ಚುನಾವಣೆ ಮಾಡಬೇಕಿತ್ತು. ಏಕೆ ಪಕ್ಷ ಬಿಟ್ಟು ಹೋದರು ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಕಾರ್ಯಕರ್ತರು ಒಟ್ಟಾಗಿದ್ದಾರೆ. ಬಣ ರಾಜಕಾರಣದ ಪ್ರಶ್ನೆಯೇ ಇಲ್ಲ. ಸದ್ಯ ಉಂಟಾಗಿರುವ ಗೊಂದಲದ ಕುರಿತು ಪಕ್ಷದ ವರಿಷ್ಠರಿಗೆ ವಿವರ ಮಾಹಿತಿ ನೀಡಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಎಲ್ಲವೂ ಶೀಘ್ರ ಪರಿಹಾರ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು.

Latest Indian news

Popular Stories