ಬೆಳಗಾವಿ, ಜುಲೈ, 07: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ಬೆಳಗಾವಿ ಜಿಲ್ಲೆಯಲ್ಲೂ ಕೂಡ ಭಾರೀ ಮಳೆಯಿಂದ ಹಳ-ಕೊಳ್ಳ-ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಅಲ್ಲದೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿದೆ. ಕೃಷ್ಣಾ, ವೇದಗಂಗಾ ಹಾಗೂ ದೂದಗಂಗಾ ನದಿಗಳು ಮೈದುಂಬಿ ಹರಿಯುತ್ತಿರುವ ಪರಿಣಾಮ ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತವಾದ ಘಟನೆ ನಡೆದಿದ್ದು, ಜನರ ಸಂಚಾರ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯಿಂದ ದೂದಗಂಗಾ ನದಿಯಿಂದ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ಇನ್ನು ಕೃಷ್ಣಾ ನದಿಗೆ ಸುಮಾರು 55 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರಿನ ಒಳಹರಿವು ಇದ್ದು, ಮುಂಜಾಗ್ರತಾ ಕ್ರಮವಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.
ಕೃಷ್ಣಾ ಒಳಹರಿವಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಲ್ಲದೆ, ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಪ್ರವಾಹದ ಭೀತಿ ಎದುರಾಗಿದ್ದರೂ ಕೂಡ ಇಲ್ಲಿಯವರೆಗೂ ಒಂದೇ ಒಂದು ಕಾಳಜಿ ಕೇಂದ್ರವನ್ನು ಕೂಡ ತೆರೆದಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಸ್ಥಳಿಯರು ಆಕ್ರೊಶ ಹೊರಹಾಕುತ್ತಿದ್ದಾರೆ.