ಬೆಂಗಳೂರು: ಪೊಲೀಸ್ ಅಧಿಕಾರಿಗಳು ಆಯಾ ಕಟ್ಟಿನ ಸ್ಥಳಕ್ಕೆ 80 ಲಕ್ಷದಿಂದ 1 ಕೋಟಿ ರೂ ವರೆಗೂ ಲಂಚ ಕೊಟ್ಟು ಬಂದಿದ್ದಾರೆ. ಹಾಗಾಗಿ ಪೊಲೀಸರು ಬೀದಿಬದಿ ವ್ಯಾಪಾರಿಗಳ ,ಹೋಟೆಲ್ ಗಳ ವಸೂಲಿಗೆ ಇಳಿದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಭ್ರಷ್ಟಾಚಾರದ ವಿರುದ್ದ ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಲಂಚ ಕೊಡದೆ ಯಾವುದೇ ರೀತಿಯ ಕೆಲಸಗಳು ಆಗುತ್ತಿಲ್ಲ. ಜನರು ರೋಸಿ ಹೋಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ 20 ಅಧಿಕ ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಸೋಲಿನ ಭಯದಿಂದ ಬಿಜೆಪಿಯವರು ಬಿಬಿಎಂಪಿ ಚುನಾವಣೆ ನಡೆಸಲಿಲ್ಲ. ಪಾಲಿಕೆಗೆ ಚುನಾವಣೆ ನಡೆಸಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು ಎಂದು ತಿಳಿಸಿದರು.