ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗೆ ನಿರ್ಬಂಧ; ನಿಯಮ ಮೀರಿದರೆ 50 ಸಾವಿರ ರೂ. ದಂಡ: ಡಿಸಿಎಂ

ಬೆಂಗಳೂರು: ಬೆಂಗಳೂರು ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅನಧಿಕೃತ ಫ್ಲೆಕ್ಸ್ ನಿರ್ಬಂಧ ಹೇರಲಾಗುವುದು, ಒಂದು ವೇಳೆ ನಿಯಮ ಮೀರಿದರೆ ಪಾಲಿಕೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿ, ಒಂದು ಫ್ಲೆಕ್ಸ್ ಗೆ ತಲಾ 50 ಸಾವಿರ ದಂಡ ವಿಧಿಸಲಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ಫ್ಲೆಕ್ಸ್ ತೆರವಿಗೆ ಕೋರ್ಟ್ ಮೂರು ವಾರಗಳ ಗಡವು ನೀಡಿದೆ. ರಾಜಕೀಯ ಪಕ್ಷಗಳ ನಾಯಕರು ಸೇರಿದಂತೆ ಎಲ್ಲ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗುವುದು. ಈ ವಿಚಾರವಾಗಿ ನಮ್ಮ ಸಚಿವರು ಹಾಗೂ ನಾಯಕರಿಗೆ ಮನವಿ ಮಾಡಿದ್ದೇನೆ. ಫ್ಲೆಕ್ಸ್ ನಿಷೇಧ ಕುರಿತು ಮುಂದಿನ ದಿನಗಳಲ್ಲಿ ನೀತಿ ರೂಪಿಸುತ್ತೇವೆ ಎಂದರು. 

ಇನ್ನು ಮುಂದೆ ಜನ್ಮದಿನ, ಶ್ರದ್ಧಾಂಜಲಿ, ಶುಭ ಸಂದೇಶ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರ ಸೇರಿದಂತೆ ಯಾವುದೇ ಅನಧಿಕೃತ ಫ್ಲೆಕ್ಸ್ ಹಾಕುವಂತಿಲ್ಲ. ಇದಕ್ಕೆ ಎಲ್ಲಾ ಪಕ್ಷಗಳು ಹಾಗೂ ನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡಿದ ಡಿಸಿಎಂ, ಸರ್ಕಾರದಿಂದ ಫ್ಲೆಕ್ಸ್ ಹಾಕುವುದಿದ್ದರೆ, ಸಮಯ, ಅಳತೆ, ಸ್ಥಳ ನಿಗದಿ ಮಾಡಿ ಅನುಮತಿ ನೀಡಲಾಗುವುದು. ಇದಕ್ಕೂ ನೀತಿ ರೂಪಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. 134 ದೂರುಗಳು ಬಂದಿದ್ದು, 40 ಎಫ್ಐಆರ್ ದಾಖಲಿಸಲಾಗಿದೆ ಖಾಸಗಿ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕಲು ನಿರ್ಬಂಧ ಇರುವುದಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು. 

Latest Indian news

Popular Stories