ಸೋಲಿನ ಭೀತಿಯಿಂದ ಶೋಭಾ ಕ್ಷೇತ್ರ ಬದಲಾವಣೆ: ಸಚಿವ ಬೈರತಿ ಸುರೇಶ್ ವ್ಯಂಗ್ಯ

ಕೆ.ಆರ್.ಪುರ: ‘ಬೆಂಗಳೂರು ಉತ್ತರ ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸೋಲಿನ ಭೀತಿಯಿಂದ ಪ್ರತಿ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುತ್ತಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದರು.

ಕೆ.ಆರ್.ಪುರದಲ್ಲಿ ನಡೆದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಶೋಭಾ ಕರಂದ್ಲಾಜೆ ಅವರು ವಿಧಾನಸಭೆ, ಲೋಕಸಭೆ ಸೇರಿದಂತೆ ಐದು ಬಾರಿ ಕ್ಷೇತ್ರ ಬದಲಾವಣೆ ಮಾಡಿದ್ದಾರೆ.ಒಂದೆಡೆ ನೆಲೆನಿಲ್ಲದೆ ಕ್ಷೇತ್ರ ಬದಲಾವಣೆ ಮಾಡುತ್ತ ಬಂದಿದ್ದಾರೆ. ಒಮ್ಮೆ ಗೆದ್ದ ನಂತರ ಕ್ಷೇತ್ರದ ಕಡೆ ಮುಖ ಮಾಡದೆ, ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸದೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾಲಹರಣ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಚುನಾವಣೆ ಬಂದಾಗ ಕ್ಷೇತ್ರ ನೆನಪಾಗಿ ಮಂಗಳೂರು ಕ್ಷೇತ್ರದಲ್ಲಿ ಓಡಾಡಲು ಆರಂಭಿಸಿದಾಗ ಅಲ್ಲಿನ ಜನರು ಗೋ ಬ್ಯಾಕ್ ಅಭಿಯಾನ ನಡೆಸಿದ್ದರು. ಮತದಾರರಿಗೆ ಹೆದರಿ ಈಗ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಂದಿದ್ದಾರೆ.ಇವರಿಗೆ ಮತ ನೀಡಿದರೆ ಮತ್ತೆ ಗೋಬ್ಯಾಕ್ ಅಭಿಯಾನ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.ಇಂತಹ ರಾಜಕಾರಣಿಗಳಿಗೆ ಮತ್ತೊಮ್ಮೆ ಅವಕಾಶ ನೀಡಿದರೆ ದೇಶ ಮತ್ತು ರಾಜ್ಯ ಎರಡು ಹಾಳಾಗುತ್ತದೆ’ ಎಂದು ಹೇಳಿದರು.

‘ಶೋಭಾ ಕರಂದ್ಲಾಜೆ ಅಂತರವನ್ನು ಅಧಿಕಾರದಿಂದ ದೂರವಿಡಬೇಕು. ಸುಶಿಕ್ಷಿತ ಪ್ರಜ್ಞಾವಂತ ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಪ್ರೊ.ರಾಜೀವ್ ಗೌಡ ಅವರಿಗೆ ಅವಕಾಶ ಮಾಡಿಕೊಡಬೇಕು. ಕೋಮುಗಲಭೆ, ದ್ವೇಷ ರಾಜಕಾರಣ ಮಾಡುವ ಬಿಜೆಪಿಯಿಂದ ಅಭಿವೃದ್ಧಿ ಅಸಾಧ್ಯ.

Latest Indian news

Popular Stories