ಸುಳ್ಳಿನ ಸಿನಿಮಾ ಬಾಕಿ ಇರಬಹುದು: ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆ

ಮೈಸೂರು: ‘ಬಿಜೆಪಿ ಸರ್ಕಾರದಲ್ಲಿ ದೇಶದಲ್ಲಿ ಅಭಿವೃದ್ಧಿ ಆಗಿದ್ದರೆ ತಾನೇ ಟ್ರೇಲರ್ ತೋರಿಸುವುದು? ಮುಂದೆ ಬರಲಿರುವುದು ನರೇಂದ್ರ ಮೋದಿ ಅವರ ಸುಳ್ಳಿನ ಸಿನಿಮಾ ಇರಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಸೋಮವಾರ ಬಂದಿಳಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು 200 ಕ್ಷೇತ್ರಗಳಲ್ಲಿ ಮಾತ್ರ. ಇದು ಅವರ ಸಮೀಕ್ಷೆಯಿಂದಲೇ ಗೊತ್ತಾಗಿದೆ. ಕಡಿಮೆ ಸ್ಥಾನ ಬರುತ್ತದೆ ಎಂದು ತಿಳಿದ ಮೇಲೆಯೇ ಹೆಚ್ಚು ಸ್ಥಾನ ಬರುತ್ತೇವೆಂದು ಬಿಂಬಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ನಾಯಕರು ಮಾಡುತ್ತಿದ್ದಾರೆ. ಇದು ಕೂಡ ಅವರ ತಂತ್ರಗಾರಿಕೆ’ ಎಂದು ಹೇಳಿದರು.

‘ರಾಜ್ಯದಲ್ಲಿ 18ರಿಂದ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಬಿಜೆಪಿಯ ಸುಳ್ಳಿಗೆ ಯಾರೂ ಮರುಳಾಗುವುದಿಲ್ಲ. ಮೋದಿಯೂ ಬಂದು ಕರ್ನಾಟಕದಲ್ಲಿ ಪ್ರಚಾರ ಮಾಡಲಿ. ವಿಧಾನಸಭೆ ಚುನಾವಣೆಯಲ್ಲಿ ಅವರು ಹಲವೆಡೆ ಬಂದು ಪ್ರಚಾರ ಮಾಡಿದ್ದರು; ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಬರಲಿ ಬಿಡಿ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ಗೆ ಅನೇಕರು ಬರಲಿದ್ದಾರೆ. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು. ‘ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನ ಭೇಟಿಯಾಗಿಲ್ಲ; ಭೇಟಿಯಾಗುವುದಿಲ್ಲ. ದೂರವಾಣಿಯಲ್ಲೂ ಮಾತನಾಡಿಲ್ಲ. ಸಚಿವ ಮಹದೇವಪ್ಪ ಭೇಟಿಯಾಗಿ ಚರ್ಚಿಸಿದ್ದಾರೆ’ ಎಂದರು.

Latest Indian news

Popular Stories