ನಟಿ ಛಾಯಾಸಿಂಗ್‌ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು: ಕೆಲಸದಾಕೆ ಬಂಧನ

ಬೆಂಗಳೂರು: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎನ್‌ಜಿಒಎಸ್ ಕಾಲೊನಿ ನಿವಾಸಿ ಉಷಾ (43) ಬಂಧಿತ ಮಹಿಳೆ.

ಆರೋ‍ಪಿಯಿಂದ ₹4 ಲಕ್ಷ ಮೌಲ್ಯದ 66 ಗ್ರಾಂ ಚಿನ್ನ ಮತ್ತು 155 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಎನ್‌ಎಚ್‌ಸಿಎಸ್ ಲೇಔಟ್‌ನಲ್ಲಿ ವಾಸವಾಗಿರುವ ಛಾಯಾಸಿಂಗ್ ಅವರ ತಾಯಿ ಚಮನ್ ಲತಾ ಸಿಂಗ್ ಮನೆಯಲ್ಲಿ 2 ವರ್ಷಗಳಿಂದ ಆರೋಪಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು’ ಎಂದು ಪೊಲೀಸರು ಹೇಳಿದರು.

‘ಮನೆ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಚಮನ್‌ ಲತಾಸಿಂಗ್‌ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಸಾಲ ತೀರಿಸುವ ಸಲುವಾಗಿ ಮಾಲೀಕರ ಮನೆಯಲ್ಲಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ಜಪ್ತಿ ಮಾಡಿದ್ದ ಆಭರಣವನ್ನು ನಟಿ ಛಾಯಾಸಿಂಗ್ ಅವರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಂಗಳವಾರ ಮರಳಿಸಿದರು.

ನಕಲಿ ಕೀ ಬಳಸಿ ಮನೆಯಲ್ಲಿ ಚಿನ್ನಾಭರಣ ಕಳವು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಗಳಲ್ಲಿ ನಕಲಿ ಕೀ ಬಳಸಿ ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್‌ (44) ಬಂಧಿತ ಆರೋಪಿ.

‘ಡ್ರಾಯರ್‌ನಲ್ಲಿ ಇಡಲಾಗಿದ್ದ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಮನೆ ಮಾಲೀಕ ದೂರು ನೀಡಿದ್ದರು. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 422 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್‌ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

Latest Indian news

Popular Stories