ಮಗಳ ಹೆಸರಲ್ಲಿ 600 ಮಕ್ಕಳ ವಿದ್ಯಾಭ್ಯಾಸಕ್ಕೆ ಎಎಸ್‌ಐ ನೆರವು

ಬೆಂಗಳೂರು: ಇಲ್ಲೊಬ್ಬ ತಂದೆ ಅಕಾಲಿಕ ನಿಧನ ಹೊಂದಿದ ತಮ್ಮ ಪುತ್ರಿ ಹೆಸರಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. 4 ವರ್ಷಗಳ ಕಾಲ ತಮ್ಮೊಂದಿಗಿದ್ದ ಪುತ್ರಿ ಹರ್ಷಾಲಿ ಹೆಸರಿನಲ್ಲಿ ಆಕೆಯ ತಂದೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಲೋಕೇಶಪ್ಪ ತಮ್ಮ ಒಂದು ತಿಂಗಳ ಸಂಬಳವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಡುಪಿಟ್ಟಿದ್ದಾರೆ.

ಶಿವಾಜಿನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿರುವ ಲೋಕೇಶಪ್ಪ ಹಾಸನ ಜಿಲ್ಲೆಯ ಅರಸೀಕೆರೆಯ ವಾಲೇಹಳ್ಳಿಯವರು. 2005ರಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ವೃತ್ತಿ ಆರಂಭಿಸಿದ್ದರು. ಲೋಕೇಶಪ್ಪ ಮತ್ತು ಪತ್ನಿ ಸುಧಾಮಣಿ ದಂಪತಿಗೆ ಹರ್ಷಾಲಿ ಮತ್ತು ಜನ್ಯಸ್ವರ ಎಂಬ ಇಬ್ಬರು ಹೆಣ್ಣು ಮಕ್ಕಳು. 2019ರಲ್ಲಿ ಶಿವಾಜಿನಗರದ ಪೊಲೀಸ್‌ ವಸತಿ ಸಮುಚ್ಚಯದ ಕಸದ ರಾಶಿಗೆ ಬಿದ್ದಿದ್ದ ಬೆಂಕಿ ತಗುಲಿ ನಾಲ್ಕು ವರ್ಷದ ಹರ್ಷಾಲಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿತ್ತು. 9 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫ‌ಲಕಾರಿಯಾಗದೆ ಹರ್ಷಾಲಿ ಮೃತಪಟ್ಟಿದ್ದಳು.

ಈ ದುರ್ಘ‌ಟನೆಯಿಂದ ವಿಚಲಿತಗೊಂಡ ಲೋಕೇಶಪ್ಪ ದಂಪತಿ, ಮಗಳ ಹೆಸರನ್ನು ಚಿರಸ್ಥಾಯಿ ಆಗಿ ಇಡಲು ನಿರ್ಧರಿಸಿ, ಅದೇ ವರ್ಷ ‘ಹರ್ಷಾಲಿ ಫೌಂಡೇಶನ್‌’ ಸ್ಥಾಪಿಸಿದ್ದರು. ಈ ಮೂಲಕ ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು. ಅದಕ್ಕಾಗಿ ತಮ್ಮ ಒಂದು ತಿಂಗಳ ವೇತನವನ್ನು ಮೀಸಲಿಟ್ಟಿದ್ದರು. ಅವರ ಸಮಾಜಮುಖೀ ಸೇವೆ ಗಮನಿಸಿದ ಸಹೋದ್ಯೋಗಿಗಳು, ಸಂಬಂಧಿಕರು ಹಾಗೂ ಸ್ನೇಹಿತರು ಕೂಡ ಆರ್ಥಿಕ ನೆರವು ನೀಡಿ ಪ್ರತಿ ವರ್ಷ ಆರು ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ಪುಸ್ತಕ, ಪೆನ್ನು, ನೋಟ್‌ ಬುಕ್‌ಗಳು ಸೇರಿ ವಿವಿಧ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

Latest Indian news

Popular Stories