ಗೋದಾಮಿಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿ

ಬೆಂಗಳೂರು: ಕೊತ್ತನೂರಿನ ಗೋದಾಮಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಭಾರೀ ಪ್ರಮಾಣದ ವಸ್ತುಗಳು ಸುಟ್ಟಿಕರಕಲಾಗಿದೆ.

ಗವಿಸಿದ್ದೇಶ್ವರ ದೇವಸ್ಥಾನ ಸಮೀಪದ ಗೋದಾಮಿನಲ್ಲಿ ಸೋಮವಾರ ಮುಂಜಾನೆ ೪ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮುಂಜಾನೆ ಗೋದಾಮಿನಲ್ಲಿ ಮೊದಲಿಗೆ ದಟ್ಟ ಹೊಗೆ ಆವರಿಸಿ, ಕೆಲವೇ ನಿಮಿಷಗಳಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ವಾಹನಗಳೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಐದಾರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಭಾರೀ ಪ್ರಮಾಣದ ವಸ್ತುಗಳು ಸುಟ್ಟಿ ಬೂದಿಯಾಗಿವೆ. ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋದಾಮಿನ ಮಾಲೀಕರು ಈವರೆಗೂ ಯಾವುದೇ ದೂರು ನೀಡಿಲ್ಲ. ಹೀಗಾಗಿ ನಷ್ಟದ ಪ್ರಮಾಣದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಕೊತ್ತನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories