ಬಿಜೆಪಿ ಸವಾಲುಗಳನ್ನು ಎದುರಿಸುವಾಗಲೆಲ್ಲ ‘ಪಾಕಿಸ್ತಾನ್ ಝಿಂದಾಬಾದ್’ ಎನ್ನುವ ಶಬ್ದ ಸದ್ದು ಮಾಡುತ್ತದೆ:ಪ್ರಿಯಾಂಕ್ ಖರ್ಗೆ

ಬೆಂಗಳೂರು: ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಝಿಂದಾಬಾದ್”ಎಂದು ಕೂಗಿರುವುದಾಗಿ ಹೇಳಿದ್ದಾರೆ. ಅಕಸ್ಮಾತ್ ಅಲ್ಲಿ “ಪಾಕಿಸ್ತಾನ” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ.

ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು, ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ” ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.

Latest Indian news

Popular Stories