ನೀವೇ ದೇವಸ್ಥಾನಗಳನ್ನು ಕಟ್ಟಿ, ನೀವೇ ಪೂಜಾರಿಗಳಾಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕಲ್ಲು ಒಡೆದು, ಗುಡಿ ಕಟ್ಟುವವರು ನೀವು, ವಿಗ್ರಹ ತರುವವರು ನೀವು, ಆದರೆ, ನಿಮಗೆ ಪೂಜೆಗೆ ಅವಕಾಶವಿಲ್ಲ. ಹಾಗಾಗಿ, ನೀವೇ ದೇವಸ್ಥಾನ ಕಟ್ಟಿಕೊಂಡು, ನೀವೇ ಪೂಜಾರಿಗಳಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಲಹೆ ನೀಡಿದರು.

ನಗರದಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೂದ್ರರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿದ್ದಾಗ, ನಾರಾಯಣಗುರುಗಳು ಅವುಗಳನ್ನು ತಿರಸ್ಕರಿಸಿ, ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ.ಅದೇ ಮಾರ್ಗವನ್ನು ನೀವೂ ಅನುಸರಿಸಬೇಕು ಎಂದು ತಿಳಿಸಿದರು.

“ಸಬ್ ಕಾ ಸಾಥ್-ಸಬ್ ಕಾ ವಿಕಾಸ್” ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ಇವತ್ತು ನಡೆಯುತ್ತಿದೆ. ಆದರೆ ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಮನುಷ್ಯರನ್ನು ಜಾತಿ-ಧರ್ಮದ ಆಧಾರದಲ್ಲಿ ದ್ವೇಷಿಸುವುದು ಅಮಾನವೀಯವಾದದ್ದು.
ವೈಚಾರಿಕ – ವೈಜ್ಞಾನಿಕ ಸಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಹೋರಾಡಿದ್ದರು. ಶರಣರು ನುಡಿದಂತೆ ನಡೆದರು. ಹೇಳಿದಂತೆಯೇ ತಮ್ಮ ಬದುಕನ್ನು ಆಚರಿಸಿದರು.

ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಒಪ್ಪಬಾರದು. ಅವಕಾಶ ಸಿಕ್ಕವರು ಮುಂದೆ ಬಂದರು, ಅವಕಾಶ ಇಲ್ಲದವರು ಹಿಂದುಳಿದರು. ಹಣೆಬರಹ ಎನ್ನುವುದೆಲ್ಲಾ ಬೋಗಸ್. ನಮ್ಮ ಊರಿನ ಶಾನುಬೋಗರು ನಮ್ಮ ಜಾತಿಯವರು ಕಾನೂನು ಓದಬಾರದು ಎಂದು ನನ್ನ ಅಪ್ಪನಿಗೆ ಒಪ್ಪಿಸಿಬಿಟ್ಟಿದ್ದರು. ಆದರೆ ನಾನು ಹಠ ತೊಟ್ಟು ಕಾನೂನು ಪದವಿ ಪಡೆದೆ. ಈಗ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಶ

ಯಾವ ಕೆಲಸವೂ ಮೇಲು ಅಲ್ಲ, ಕೀಳೂ ಅಲ್ಲ. ಈ ಕಾರಣಕ್ಕೇ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಎಲ್ಲರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು, ಅದನ್ನು ಎಲ್ಲರಿಗೂ ವಿತರಿಸಬೇಕು ಎನ್ನುವುದು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರಕಾರದ ಕಾರ್ಯಕ್ರಮಗಳೂ ಈ ಆಶಯಕ್ಕೆ ಪೂರಕವಾಗಿವೆ ಎಂದರು.

Latest Indian news

Popular Stories