ಬೆಂಗಳೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮಗೆ ಅಕ್ಷರಾಭ್ಯಾಸ ಮಾಡಿಸಿ ರಾಜಪ್ಪ ಮೇಷ್ಟ್ರು ನೆನೆದು ಸಿಎಂ ಸಿದ್ದರಾಮಯ್ಯ ನಾಡಿನ ಸಮಸ್ತ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿದ್ಯಾರ್ಥಿಗಳನ್ನು ಕೇವಲ ಶಿಕ್ಷಿತನಾಗಿಸದೆ, ಜ್ಞಾನಿಯಾಗಿಸುವ ಕೆಲಸ ಮಾಡುತ್ತಾ, ಶಾಲೆಗಳನ್ನು ಜೀವನಪಾಠ ಶಾಲೆಗಳಾಗಿ ರೂಪಿಸುವವನೇ ಆದರ್ಶ ಶಿಕ್ಷಕ.ಎಲ್ಲ ಶಿಕ್ಷಕರು ಇಂತಹ ಆದರ್ಶ ಮೈಗೂಡಿಸಿಕೊಳ್ಳಲಿ, ಎಲ್ಲ ಮಕ್ಕಳಿಗೆ ಇಂತಹ ಆದರ್ಶ ಶಿಕ್ಷಕರು ಸಿಗಲಿ ಎಂದು ಹಾರೈಸಿದ್ದಾರೆ.
ಬಾಲ್ಯದಲ್ಲಿ ಬೆರಳು ಹಿಡಿದು ಅಕ್ಷರಾಭ್ಯಾಸ ಮಾಡಿಸಿದ ರಾಜಪ್ಪ ಮೇಸ್ಟ್ರು, ಹೋರಾಟದ ಚಿಂತನೆಗಳಿಗೆ ದಾರಿ ತೋರಿದ ಪ್ರೊ. ನಂಜುಂಡಸ್ವಾಮಿಯವರು, ಸೈದ್ಧಾಂತಿಕ ಬದ್ಧತೆಗೆ ಬಲತುಂಬಿದ ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿ, ಬಾಬಾ ಸಾಹೇಬರು, ಕನಕದಾಸರು, ನಾರಾಯಣ ಗುರುಗಳು ಹೀಗೆ ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳನ್ನು ಈ ದಿನ ಅತ್ಯಂತ ಗೌರವದಿಂದ ನೆನೆದು, ನಮಿಸುತ್ತೇನೆ. ನಾಡಿನ ಸಮಸ್ತ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.