ಬೆಂಗಳೂರು: ಸಿಎಂ ವಿರುದ್ಧದ (CM Siddaramaiah) ಮುಡಾ ಹಗರಣಕ್ಕೆ (MUDA Case) ಬಹುದೊಡ್ಡ ತಿರುವು ಸಿಗುವ ಎಲ್ಲ ಲಕ್ಷಣಗಳು ಕಾಣ್ತಿವೆ. ಸಿಎಂ ಕುರ್ಚಿಗೆ ಕುತ್ತು ತಂದಿರುವ ಸೈಟ್‌ಗಳನ್ನ ಸಿಎಂ ಪತ್ನಿ ವಾಪಸ್ ನೀಡುವುದಾಗಿ ಮುಡಾಗೆ ಪತ್ರ ಬರೆದಿದ್ದಾರೆ. ಮುಡಾ ಕಮಿಷನರ್‌ಗೆ (MUDA Commissioner) ಪತ್ರ ಬರೆದಿರುವ ಸಿಎಂ ಪತ್ನಿ ಪಾರ್ವತಿ ಅವ್ರು 14 ಸೈಟ್‌ಗಳನ್ನ ವಾಪಸ್ ಮಾಡುತ್ತೇನೆ ಅಂತ ಹೇಳಿದ್ದಾರೆ.
ಭಾವನಾತ್ಮಕವಾಗಿ ಪತ್ರ ಬರೆದಿರುವ ಅವರು, ಅರಿಶಿನ ಕುಂಕುಮದ ಭಾಗವಾಗಿ ನನ್ನ ಅಣ್ಣ ನನಗೆ ಜಮೀನು ಕೊಟ್ಟಿದ್ದರು. ಕೆಸರೆ ಗ್ರಾಮದ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಮುಡಾ ವಶಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮೈಸೂರಿನ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನಗಳನ್ನು ಮಂಜೂರು ಮಾಡಿತ್ತು. ಈ ಸೈಟ್‌ಗಳನ್ನ ನಾನು ಹಿಂದಿರುಗಿಸಲು ನಿರ್ಧಾರ ಮಾಡಿದ್ದೇನೆ. ನನ್ನ ಪತಿಯ ಮುಂದೆ ಈ ಎಲ್ಲ ಸೈಟ್‌ಗಳು ತೃಣಕ್ಕೆ ಸಮಾನ ಅಂತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ನಡುವೆ ಪತ್ನಿ ಪಾರ್ವತಿ ಅವರು ಮುಡಾ ಸೈಟ್ ವಾಪಾಸ್ ಕೊಡಲು ಬರೆದ ಪತ್ರಕ್ಕೆ ಸಿಎಂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನನ್ನ ಪತ್ನಿಯ ನಿರ್ಧಾರ ಆಶ್ಚರ್ಯ ತಂದಿದೆ ಎಂದಿರುವ ಸಿಎಂ, ನನ್ನ ಪತ್ನಿ ನಿರ್ಧಾರವನ್ನ ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡುತ್ತೇನೆ ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯಗೆ ED ಟೆನ್ಷನ್ ಸ್ಟಾರ್ಟ್ ಆಗಿದೆ. ಸ್ನೇಹಮಯಿ ಕೃಷ್ಣ ದೂರು ಆಧರಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ECIR ದಾಖಲು ಮಾಡಿಕೊಳ್ಳಲಾಗಿದೆ. ಇದರ ನಡುವೆ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಡಿ.ಕೆ ಶಿವಕುಮಾರ್, ಪರಮೇಶ್ವರ್ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.