ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಸಂಸ್ಕೃತಿ ರೂಢಿಸಲು ದಾಪುಗಾಲು ಇಟ್ಟಿದ್ದು, ಸುಜ್ಲಾನ್ ನಿಂದ 30 ಸಾವಿರ ಕೋಟಿ ರೂ., ರೆನೈಸಾನ್ಸ್ ನಿಂದ 6 ಸಾವಿರ ಕೋಟಿ ರೂ. ಹೂಡಿಕೆಗೆ ಆಸಕ್ತಿ ತೋರಲಾಗಿದೆ.
ಬಸವನಾಡಿನಲ್ಲಿ ಕೈಗಾರಿಕಾ ಸಂಸ್ಕೃತಿ ರೂಢಿಸಲು ನಮ್ಮ ಸರ್ಕಾರ ಮುಂದಡಿ ಇಟ್ಟಿದ್ದು, ಈ ನಿಟ್ಟಿನಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಕ್ಷೇತ್ರಗಳ ದೈತ್ಯ ಕಂಪನಿಗಳಾಗಿರುವ ಸುಜ್ಲಾನ್, ರೆನೈಸಾನ್ಸ್ ಕಂಪನಿಗಳ ಉನ್ನತಾಧಿಕಾರಿಗಳ ಜತೆ ಚರ್ಚೆ ನಡೆದಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸುಜ್ಲಾನ್’ ಪವನ ವಿದ್ಯುತ್ ಕ್ಷೇತ್ರಕ್ಕೆ ಅಗತ್ಯವಿರುವ ಕಂಬಗಳು ಮತ್ತು ಬೃಹತ್ ಬ್ಲೇಡುಗಳ ಉತ್ಪಾದನೆಗೆ ಖ್ಯಾತಿಗಳಿಸಿದ್ದು, ವಿಜಯಪುರದಲ್ಲಿ ಹಂತಹಂತವಾಗಿ ಬೃಹತ್ 30 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಮೊದಲ ಹಂತದಲ್ಲಿ ಕಂಪನಿಯು ಬ್ಲೇಡುಗಳ ತಯಾರಿಕಾ ಘಟಕ ಆರಂಭಿಸಲಿದ್ದು, 100 ಎಕರೆ ಜಮೀನನ್ನು ಕೇಳಿದೆ. ಕಂಪನಿಯು 5,000 ಮೆಗಾವ್ಯಾಟ್ ಸಾಮರ್ಥ್ಯದ ಘಟಕವನ್ನು ಪ್ರಾರಂಭಿಸಲಿದ್ದು, ಇದು ದೇಶದಲ್ಲೇ 2ನೇ ಅತೀ ದೊಡ್ಡ ಪವನ ವಿದ್ಯುತ್ ಘಟಕವಾಗಿರಲಿದೆ.
ರೆನೈಸಾನ್ಸ್ ಕಂಪನಿಯಿಂದ 6,000 ಸಾವಿರ ಕೋಟಿ ರೂ. ಹೂಡಿಕೆ:
ಸೌರ ಫಲಕಗಳ(ಸೋಲಾರ್ ಪ್ಯಾನೆಲ್ಸ್) ತಯಾರಿಕೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಹೆಸರಾಗಿರುವ ರೆನೈಸಾನ್ಸ್ ಸೋಲಾರ್ & ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿ ಕೂಡ ವಿಜಯಪುರದಲ್ಲಿ ತನ್ನ ಘಟಕ ಆರಂಭಿಸಲು 6,000 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ಈ ಸಂಬಂಧ ಕಂಪನಿಯ ಸಿಇಒ ಮಿಲಿಂದ್ ಕುಲಕರ್ಣಿ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಯಿತು.