ಚನ್ನಪಟ್ಟಣಕ್ಕೆ ನಾನೇ ಸೇವಕ, ನಾನೇ ನಿಮ್ಮ ಮನೆ ಮಗ ಎಂದ ಡಿ ಕೆ ಶಿವಕುಮಾರ್‌

ಚನ್ನಪಟ್ಟಣ, ಜುಲೈ 02: ಚನ್ನಪಟ್ಟಣಕ್ಕೆ ಶಾಸಕರು ಇಲ್ಲದ ಕಾರಣ, ಈಗ ನಾನೇ ನಿಮ್ಮ ಮನೆ ಮಗ, ನಾನೇ ಸೇವಕ, ನಾನೇ ಶಾಸಕ, ನಾನೇ ಮಂತ್ರಿ, ನಾನೇ ಡಿಸಿಎಂ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಸೋಮವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜನರ ಸೇವೆ ಮಾಡಲು ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ.

ಜನಸೇವೆ ಮಾಡಲು ಮೊದಲು ಅವಕಾಶ ನೀಡಿದವರು ಚನ್ನಪಟ್ಟಣದ ಮತದಾರರು. ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ ನೀತಿ ನೋಡಿ ಕೆಲಸ ಮಾಡಿದ್ದೇನೆ” ಎಂದು ಹೇಳಿದರು.

ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಯಾವುದೇ ಕಾರಣಕ್ಕೂ ಬಿಡಲು ಹೋಗಬೇಡಿ. ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು, ಜನಪ್ರತಿನಿದಿಗಳು ಬಂದಿದ್ದಾರೆ. ನೀವು ನನ್ನ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನಿಮ್ಮ ಸೇವೆಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ನನ್ನ ಕಚೇರಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು” ಎಂದರು.

ಈ ಹಿಂದೆ ಇಂಧನ ಸಚಿವನಾಗಿದ್ದಾಗ ರೈತರಿಗೆ ಟ್ರಾನ್ಸ್ಫಾರ್ಮರ್ ಅಳವಡಿಕೆ ಮತ್ತು ನೀರಾವರಿ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಡಲಾಗಿತ್ತು. ಕ್ಷೇತ್ರ ವಿಂಗಡಣೆಯಾಗಿ ನಾನು ಕನಕಪುರಕ್ಕೆ ಹೋದ ನಂತರ ಯಾರಾದರೂ ಶಾಸಕರು ಹೀಗೆ ಜನರ ಬಳಿಗೆ ಬಂದು ಕೆಲಸ ಮಾಡಿದ ಉದಾಹರಣೆಯೇ ಇಲ್ಲ. ದಳ, ಬಿಜೆಪಿ ಯಾವ ಪಕ್ಷದವರನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದು ಹೇಳಿದರು.

ನಾನು ಯಾರ ಜೊತೆಗೂ ಸ್ಪರ್ಧಿಸಲು ಇಲ್ಲಿಗೆ ಬಂದಿಲ್ಲ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಮತ ನೀಡಿದ್ದೀರಿ ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. 80 ಸಾವಿರ ಮತಗಳನ್ನು ನೀಡಿದ ನಿಮಗೆ ಕೋಟಿ ನಮಸ್ಕಾರಗಳು ಎಂದು ತಿಳಿಸಿದರು.

5 ಜಿಲ್ಲಾ ಪಂಚಾಯತಿಗಳಲ್ಲಿ 4,419 ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸುಮಾರು 1,996 ಜನ ಮನೆಯಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. 1,010 ಮಂದಿ ನಿವೇಶನವಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಹುಡುಕಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಕಾಡಾನೆಗಳ ಹಾವಳಿ ತಪ್ಪಿಸಲು ಬನ್ನೇರುಘಟ್ಟದಿಂದ ಇಲ್ಲಿಯವರೆಗೆ 180 ಕಿಮೀ ಉದ್ದ ಬ್ಯಾರಿಕೆಡ್ ಅನ್ನು ಸುರೇಶ್ ಅವರ ಶ್ರಮದಿಂದ ಹಾಕಲಾಗುತ್ತಿದೆ. ಟಾಸ್ಕ್ ಫೋರ್ಸ್ ಸಿದ್ಧವಾಗಿದೆ” ಎಂದು ತಿಳಿಸಿದರು.

Latest Indian news

Popular Stories