17 ವಿಧಾನ ಪರಿಷತ್ ಸ್ಥಾನದ ಚುನಾವಣೆ: ಕಾಂಗ್ರೆಸ್‌ ಮೇಲುಗೈ

ಬೆಂಗಳೂರು, ಜೂನ್ 08; ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಒಟ್ಟು 17 ವಿಧಾನ ಪರಿಷತ್ ಸ್ಥಾನಗಳ ಚುನಾವಣೆ ಘೋಷಣೆಯಾಯಿತು. ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ಪಕ್ಷ ಕಾಂಗ್ರೆಸ್ 10 ಸ್ಥಾನಗಳಲ್ಲಿ ಜಯಗಳಿಸಿದೆ.

ವಿಧಾನ ಪರಿಷತ್‌ನ 3 ಶಿಕ್ಷಕ, 3 ಪದವೀಧರ ಕ್ಷೇತ್ರದ ಮತದಾನ ಜೂನ್‌ 3ರಂದು ನಡೆದು, ಫಲಿತಾಂಶ ಜೂನ್ 6ರಂದು ಪ್ರಕಟವಾಗಿದೆ.

ವಿಧಾನಸಭೆಯಿಂದ 11 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಘೋಷಣೆಯಾಗಿದ್ದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ 10, ಪ್ರತಿಪಕ್ಷ ಬಿಜೆಪಿ 4 ಮತ್ತು ಜೆಡಿಎಸ್‌ 3 ಸ್ಥಾನಗಳಲ್ಲಿ ಜಯಗಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಜೆಡಿಎಸ್ ಪರಿಷತ್ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸಿದ್ದವು.
ಪರಿಷತ್‌ ಬಲಾಬಲ: ಕರ್ನಾಟಕ ವಿಧಾನ ಪರಿಷತ್ ಒಟ್ಟು ಸದಸ್ಯ ಬಲ 75. ಒಟ್ಟು 17 ಸ್ಥಾನಗಳ ಚುನಾವಣೆ ಬಳಿಕ ವಿಧಾನ ಪರಿಷತ್ ಸದಸ್ಯ ಬಲದಲ್ಲಿ ಬದಲಾವಣೆಯಾಗಿದೆ. ಆದರೆ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರ ಸ್ಥಾನ ಸದ್ಯಕ್ಕೆ ಭದ್ರವಾಗಿಯೇ ಇದೆ. ಕಾಂಗ್ರೆಸ್‌ಗೆ ಸಭಾಪತಿ ಸ್ಥಾನದ ಮೇಲೆ ಮೊದಲಿನಿಂದಲೂ ಕಣ್ಣಿದೆ.

ಸದ್ಯ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ 34, ಬಿಜೆಪಿ 30, ಜೆಡಿಎಸ್ 8. ಒಬ್ಬರು ಸಭಾಪತಿ, ಒಬ್ಬರು ಪಕ್ಷೇತರ (ಲಖನ್ ಜಾರಕಿಹೊಳಿ) ಇದ್ದಾರೆ. ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ 1 ಸ್ಥಾನ ತೆರವಾಗಿದ್ದು, ಚುನಾವಣೆ ನಡೆಯಬೇಕಿದೆ. ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆದ್ದಿದ್ದು, ಅವರು ರಾಜೀನಾಮೆ ನೀಡಿದ ಬಳಿಕ ತೆರವಾಗುವ ಸ್ಥಾನಕ್ಕೆ ಸಹ ಉಪ ಚುನಾವಣೆ ನಡೆಯಬೇಕಿದೆ.

Latest Indian news

Popular Stories