ಬೆಂಗಳೂರು: ಕೋಲಾರ ತಾಲೂಕಿನ ಗ್ರಾಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಂಬರು ಮಿಶ್ರಣ ಘಟಕದಿಂದ ಮಾಲಿನ್ಯವಾಗುತ್ತಿರುವ ಆರೋಪದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿದೆ.
ಧನಮಂತನಹಳ್ಳಿ ಗ್ರಾಮದ ಕೆ.ಮಂಜುನಾಥ್ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಎ.1ಕ್ಕೆ ಮುಂದೂಡಿದೆ.
ಮೇಡಿಹಾಳ ಗ್ರಾಮದ ಸರ್ವೆ ನಂಬರ್ 59ರಲ್ಲಿ ಮೆಸರ್ಸ್ ಪ್ರಶಾಂತ್ ಕ್ರಷರ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿರುವ ಹಾಟ್ ಮಿಕ್ಸ್ ಘಟಕದಿಂದ ಭಾರಿ ಮಾಲಿನ್ಯವಾಗುತ್ತಿದೆ. ಗ್ರಾಮದ ಕೃಷಿಕರ ಮೇಲೆ ಮತ್ತು ಸನಿಹದಲ್ಲೇ ಇರುವ ಶಾಲಾ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಶಾಲಾ ಮಕ್ಕಳು ಮಾಲಿನ್ಯದಿಂದ ದಿನವೂ ಸಮಸ್ಯೆ ಎದುರಿಸುವಂತಾಗಿದೆ.
ರೇಷ್ಮೆ ಇಲಾಖೆ ಕೂಡ ಸರ್ಕಾರಕ್ಕೆ ಪತ್ರ ಬರೆದು ಹಾಟ್ ಮಿಕ್ಸ್ ಘಟಕ ಸ್ಥಗಿತಗೊಳಿಸಬೇಕೆಂದು ಕೋರಿದೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೂಡಲೇ ಘಟಕವನ್ನು ಮುಚ್ಚಿಸುವಂತೆ ಮಾಲಿನ್ಯ ಮಂಡಳಿಗೆ ಸೂಚನೆ ನೀಡಬೇಕು ಎಂದು ಕೋರಿದರು. ಇದೀಗ ಕೋಲಾರ ತಾಲೂಕಿನ ಮೇಡಿಹಾಳಗ್ರಾಮದ ಬಳಿ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕದಿಂದ ಮಾಲಿನ್ಯವಾಗುತ್ತಿದೆ ಎಂದು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.