ಎಸ್ಸೆಸ್ಸೆಲ್ಸಿ ರಿಸಲ್ಟ್‌ನಿಂದ ಆಡಳಿತ ಲೋಪ ಬಯಲು: ಮಾಜಿ ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು(ಮೇ.13): ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಾಂಗ್ರೆಸ್‌ ಸರ್ಕಾರದ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನಷ್ಟೇ ಅಲ್ಲದೆ, ನೀತಿ ನಿರೂಪಕರ ಬೇಜವಾಬ್ದಾರಿತನವನ್ನೂ ಬಯಲು ಮಾಡಿದೆ ಎಂದು ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಟೀಕಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮಕ್ಕಳ ಕಲಿಕಾ ಸಿದ್ಧತೆ, ಶಿಕ್ಷಣದ ಗುಣಮಟ್ಟ ಯಾವುದನ್ನೂ ಚರ್ಚಿಸದೆ, ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿಗಳನ್ನು ಗಮನಿಸದೇ, ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತೇವೆಂದು ಘೋಷಿಸುವುದು. ಮಕ್ಕಳನ್ನು ಸಿಸಿಟಿವಿ ಕಣ್ಗಾವಲ್ಲಿ ಇರಿಸಿ ಭಯೋತ್ಪಾದನೆ ಮಾಡುವುದು, ನಂತರ ಕೃಪಾಂಕಗಳನ್ನು ನೀಡಿ ಫಲಿತಾಂಶ ಹೆಚ್ಚಿಸುವುದು ಇಂದಿನ ವ್ಯವಸ್ಥೆಯ ಕ್ರೂರ ಅಣಕವಾಗಿದೆ ಎಂದಿದ್ದಾರೆ.

2024ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಳಿಸಿದಾಗ ಕಳೆದ ಸಾಲಿಗಿಂತ (ಶೇ.83) ಈ ಬಾರಿ‌ ಶೇ.53ಕ್ಕೆ ಅಂದರೆ ಶೇ.30 ರಷ್ಟು ಫಲಿತಾಂಶ ಕುಸಿತ ಕಂಡಿದೆ. ನಂತರ ಫಲಿತಾಂಶ ಉತ್ತಮಗೊಳಿಸಲು ಕೃಪಾಂಕ ನೀಡುವ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸಿ, ಕೃಪಾಂಕ ಪಡೆಯಲು ಅರ್ಹತಾ ಅಂಕಗಳ ಪ್ರಮಾಣವನ್ನೂ ಶೇ.25ಕ್ಕೆ ಇಳಿಸಿದ್ದರಿಂದ 1.79 ಲಕ್ಷ ವಿದ್ಯಾರ್ಥಿಗಳು ಕೃಪಾಂಕದಿಂದಲೇ ಪಾಸಾಗಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ.

Latest Indian news

Popular Stories