ಬೆಂಗಳೂರು: ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಮಾನ ಹೊರಡಬೇಕೆನ್ನುವಷ್ಟರಲ್ಲಿ ಪ್ರಯಾಣಿಕ ವಿಮಾನ ಹತ್ತದೆ ವಾಪಸ್ ತೆರಳಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ವಿಚಾರಿಸಿದಾಗ ನಾನು ಉಗ್ರನೆಂದು ಹೇಳಿಕೆ ನೀಡಿರುವ ಘಟನೆ ಬೆಂಗಳೂರು ಹೊರವಲಯದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆರೋಪಿಯನ್ನ ಆದರ್ಶ್ ಕುಮಾರ್ ಸಿಂಗ್ ಎಂದು ಹೇಳಲಾಗುತ್ತಿದ್ದು, ಈತ ಫೆಬ್ರವರಿ 17ರಂದು ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ. ವಿಮಾನ ಏರಲು ತೆರಳಿದ್ದ ಆತ ಕೊನೇ ಕ್ಷಣದಲ್ಲಿ ಹಿಂತಿರುಗಿ ವಾಪಸ್ ತೆರಳಲು ಮುಂದಾಗಿದ್ದ. ಈ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿ ಭದ್ರತಾ ಪಡೆಗೆ ಮಾಹಿತಿ ನೀಡಿದ್ದರು. ಇದೇ ವೇಳೆ, ವಿಮಾನ ಹತ್ತದೆ ಯಾಕೆ ವಾಪಸ್ ತೆರಳುತ್ತಿದ್ದೀರಿ ಎಂದು ಏರ್ಪೋರ್ಟ್ ಭದ್ರತಾ ಪಡೆ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿಯ ಪ್ರಶ್ನೆಗೆ ಆದರ್ಶ್ ಕುಮಾರ್ ಸಿಂಗ್, ‘ನಾನು ಭಯೋತ್ಪಾದಕರ ಗುಂಪಿಗೆ ಸೇರಿದವನು. ನಾನು ಲಖನೌಗೆ ತೆರಳಲ್ಲ’ ಎಂದು ಬೆದರಿಕೆ ಹಾಕಿದ್ದ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಸದ್ಯ ಆರೋಪಿ ಕೆಂಪೇಗೌಡ ಏರ್ಪೋರ್ಟ್ ಠಾಣೆ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಕೆಂಪೇಗೌಡ ಏರ್ಪೋರ್ಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.