ಬೆಂಗಳೂರು: ನೀರಾವರಿ ಕ್ಷೇತ್ರದ ಅಭಿವೃದ್ಧಿ, ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸುವುದಕ್ಕೆ ಮೊದಲ ಆದ್ಯತೆ. ನಂತರ ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
“ಯಗಚಿ ನದಿ ಅಣೆಕಟ್ಟಿನ ಕಾಲುವೆಗಳ ಅಭಿವೃದ್ದಿ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಈಗಾಗಲೇ 5.5 ಕಿ.ಮೀ.ನಷ್ಟು ಮಣ್ಣನ್ನು ತೆಗೆದಿದ್ದು, 1.5 ಕಿ.ಮೀ.ನಷ್ಟು ಕಾಮಗಾರಿ ಭೂಸ್ವಾಧೀನದ ವಿಚಾರವಾಗಿ ಸ್ಥಗಿತಗೊಂಡಿದೆ. ಎತ್ತಿನಹೊಳೆ ಯೋಜನೆಗೆ ಮಹತ್ವ ನೀಡಿದಂತೆ ಯಗಚಿ ಯೋಜನೆಗೂ ಮೊದಲ ಆದ್ಯತೆ ನೀಡುತ್ತೇವೆ” ಎಂದರು.
ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು ಅವರ “ಭದ್ರಾ ಮೇಲ್ದಂಡೆ ಯೋಜನೆಯ ಮಂದಗತಿ ಕಾಮಗಾರಿಯ ಬಗ್ಗೆ ಪ್ರಶ್ನೆ ಕೇಳಿದಾಗ, “ಭದ್ರಾ ಮೇಲ್ದಂಡೆ ಯೋಜನೆಯ ಅಡಿ ರೂ. 856 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಯೋಜನೆ ಹಾದು ಹೋಗುವ ಸಾಕಷ್ಟು ಕಡೆ ಭೂ ಸ್ವಾಧೀನದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಕಾಮಗಾರಿ ಕುಂಠಿತವಾಯಿತು. ಕೇಂದ್ರ ಸರ್ಕಾರ ರೂ.5,300 ಕೋಟಿ ಅನುದಾನ ನೀಡುವಲ್ಲಿ ವಿಳಂಬ ಮಾಡಿರುವ ಕಾರಣ ಹಿನ್ನಡೆಯಾಗಿದೆ” ಎಂದರು.
ಎತ್ತಿನಹೊಳೆ ಯೋಜನೆಯು ಮಂದಗತಿ ಕಾಮಗಾರಿ ಹಾಗೂ ರಣಘಟ್ಟ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎನ್ನುವ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ರಣಘಟ್ಟ ಯೋಜನೆಯ ಕಾಲುವೆಯು 5.24 ಕಿಮೀ ನಷ್ಟು ಉದ್ದ ಸುರಂಗ ಮಾರ್ಗದಲ್ಲಿ ಹೋಗಬೇಕು. ಇದರಲ್ಲಿ 2.4 ಕಿಮೀ ನಷ್ಟು ಕಾಮಗಾರಿ ಮುಗಿದಿದೆ. ಎತ್ತಿನಹೊಳೆ ಯೋಜನೆಗೆ 402 ಎಕರೆಯಷ್ಟು ಅರಣ್ಯ ಭೂಮಿಯನ್ನು ಹಾಸನ ಮತ್ತು ತುಮಕೂರು ಭಾಗದಲ್ಲಿ ಸ್ವಾಧೀನ ಪಡಿಸಿಕೊಳ್ಳಬೇಕು” ಎಂದರು.