ನಕಲಿ ಜಾತಿ ‘ಪ್ರಮಾಣಪತ್ರ’ ಪಡೆದವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದವರಿಗೆ ನೋಟಿಸ್ ನೀಡಿ ಅವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಇದೀಗ ಹೈಕೋರ್ಟ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಉಪಪಂಗಡಗಳನ್ನು ಮಾತ್ರ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪ ಪಂಗಡದವರಿಗೂ ಪರಿಶಿಷ್ಟ ವರ್ಗದ ನಕಲಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಇದೀಗ ಅರ್ಜಿ ಸಂಬಂಧ ಹೈಕೋರ್ಟ್, ಸಂಬಂಧಿಸಿದವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರಾಜ್ಯ ಎಸ್‌ಸಿ-ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಹಾಗೂ ಪ್ರತಿವಾದಿಗಳ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ, ಅರ್ಜಿಯಲ್ಲಿ ಉಲ್ಲೇಖಿಸಲಾದ ನಕಲಿ ಜಾತಿ ಪ್ರಮಾಣಪತ್ರಗಳು ಹಾಗೂ ಇತರೆ ಅನರ್ಹರಿಗೆ ನೀಡಿದ್ದಾರೆ ಎನ್ನಲಾದ ಜಾತಿ ಪ್ರಮಾಣಪತ್ರಗಳ ಕುರಿತು ಸಂಬಂಧಿಸಿದವರಿಗೆ ಮಾ.27ರೊಳಗೆ ನೋಟಿಸ್ ನೀಡಿ ಆದಷ್ಟು ಶೀಘ್ರವಾಗಿ ಕ್ರಮ ಜರುಗಿಸಬೇಕು.

ಆ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಪರ ವಿಶೇಷ ವಕೀಲ ಸಿ.ಜಗದೀಶ್‌ ಅವರಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಏ.2ಕ್ಕೆ ಮುಂದೂಡಿತು.

Latest Indian news

Popular Stories