ಗ್ಯಾರಂಟಿ ಯೋಜನೆಗಳು: ಸರ್ಕಾರದ ಸಾಧನೆ ಜನರನ್ನು ತಲುಪುತ್ತಿಲ್ಲ, ಸಿಎಂ ಸಿದ್ದರಾಮಯ್ಯ

ಬೆಂಗಳೂರು(ಜೂ.14): ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬರೋಬ್ಬರಿ ಮೂರು ತಿಂಗಳ ಬಳಿಕ ಸಚಿವ ಸಂಪುಟ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ವಿಶೇಷ ಒತ್ತು ನೀಡಬೇಕು. ಆಡಳಿತವನ್ನು ಮತ್ತಷ್ಟು ಬಿಗಿಯಾಗಿ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ಮಾಡಬೇಕು’ ಎಂದು ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ನೀತಿ ಪಾಠ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾ.14ರ ಬಳಿಕ ಸಚಿವ ಸಂಪುಟ ಸಭೆ ನಡೆಸಿರಲಿಲ್ಲ. ಗುರುವಾರ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಕಳೆದ ಮೂರು ತಿಂಗಳಿಂದ ನೆನೆಗುದಿಗೆಗೆ ಬಿದ್ದಿರುವ ಕಾಮಗಾರಿಗಳಿಗೆ ವೇಗ ನೀಡುವ ಜತೆಗೆ ಆಡಳಿತ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಸಾಲು ಸಾಲು ಜನಪರ, ಅಭಿವೃದ್ಧಿ ಪರ ಯೋಜನೆ ಅನುಷ್ಠಾನ ಮಾಡಿದ್ದರೂ ಸಮಾಜದಲ್ಲಿನ ಕೆಲ ಅಹಿತಕರ ಘಟನೆಗಳಿಂದ ಸರ್ಕಾರದ ಸಾಧನೆ ಜನರನ್ನು ತಲುಪುತ್ತಿಲ್ಲ. ಹೀಗಾಗಿ ನಿರೀಕ್ಷಿತ ಜನ ಬೆಂಬಲ ದೊರೆಯದಿರುವುದು ತಿಳಿಯುತ್ತಿದೆ. ಹೀಗಾಗಿ ರಾಜ್ಯದ ಆಡಳಿತವನ್ನು ಮತ್ತಷ್ಟು ಬಿಗಿಯಾಗಿ, ಪರಿಣಾಮಕಾರಿಯಾಗಿ ಹಾಗೂ ಜನಸ್ನೇಹಿಯಾಗಿ ಮಾಡಬೇಕು. ಜತೆಗೆ ಆಡಳಿತದಲ್ಲಿ ಬಿಗುವು ತಂದು ಆಡಳಿತ ಸುಧಾರಣೆಗೆ ಒತ್ತು ನೀಡಬೇಕು. ಯಾವುದೇ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಪೂರ್ಣಗೊಳಿಸಬೇಕು. ಜನರ ಜತೆ ಸದಾ ಸಂಪರ್ಕದಲ್ಲಿರಲು ಪ್ರಯತ್ನಿಸಬೇಕು. ಜನರ ಸಮಸ್ಯೆ ಬಗೆಹರಿಸಲು ಮತ್ತೊಮ್ಮೆ ಸಚಿವರೆಲ್ಲರೂ ಜನತಾದರ್ಶನ ನಡೆಸಬೇಕು ಎಂದು ಸೂಚಿಸಿದ್ದಾರೆ.

Latest Indian news

Popular Stories