ಸೇವಾ ದೂರು ನಿರ್ಣಯ ಅಧಿಕಾರ ಎಸ್ಸಿ ಆಯೋಗಕ್ಕಿಲ್ಲ ಹೈಕೋರ್ಟ್‌

ಬೆಂಗಳೂರು: ಸೇವಾ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಇತ್ಯರ್ಥಪಡಿಸುವ ಅಧಿಕಾರ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಇಲ್ಲ ಎಂದಿರುವ ಹೈಕೋರ್ಟ್, ಪರಿಶಿಷ್ಟ ಜಾತಿ ನೌಕರನಿಗೆ ಉನ್ನತ ಹುದ್ದೆ ನೀಡುವಂತೆ ಆಯೋಗ ಹೊರಡಿಸಿದ ಆದೇಶವನ್ನು ರದ್ದುಪಡಿಸಿದೆ.

ಪರಿಶಿಷ್ಟ ಜಾತಿ ನೌಕರ ವಿ. ಶ್ರೀನಿವಾಸ್ ಜೇಷ್ಠತೆ ಹಾಗೂ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ಹುದ್ದೆ ನೀಡಿಲ್ಲವೆಂದು ಆಕ್ಷೇಪಿಸಿ ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದು, ಆ ದೂರು ಆಧರಿಸಿ ಆತನಿಗೆ ಉನ್ನತ ಹುದ್ದೆ ನೀಡುವಂತೆ ಆಯೋಗ ಹೊರಡಿಸಿದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಚ್ಚಿನ್ ಶಂಕರ್ ಮಗ್ದಮ್ ಅವರಿದ್ದ ಪೀಠ ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿ ರಾಷ್ಟ್ರೀಯ ಆಯೋಗದ ಆದೇಶ ರದ್ದುಗೊಳಿಸಿದೆ.

ಸೇವಾ ವಿಷಯಗಳಿಗೆ ಸಂಬಂಧಿಸಿದ ಜೇಷ್ಠತೆ ಹಾಗೂ ಬಡ್ತಿ ಕುರಿತಾಗಿ ದಾಖಲಾದ ದೂರಗಳನ್ನು ಇತ್ಯರ್ಥಪಡಿಸುವ ಹಾಗೂ ನಿರ್ಣಯಿಸುವ ಅಧಿಕಾರ ಆಯೋಗಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಂತಹ ಪ್ರಕರಣಗಳು ಕಾನೂನಿನ ವ್ಯಾಪ್ತಿಯೊಳಗೆ ಬರುತ್ತವೆ ಮತ್ತು ಸೇವೆ-ಸಂಬಂಧಿತ ವಿವಾದಗಳನ್ನು ಇತ್ಯರ್ಥಪಡಿಸುವ ಸಾಮರ್ಥ್ಯವಿರುವ ಆಡಳಿತಾತ್ಮಕ ನ್ಯಾಯಮಂಡಳಿಗಳಂತಹ ವಿಶೇಷ ಸಂಸ್ಥೆಗಳ ನಿರ್ಣಯಕ್ಕೆ ಒಳಪಟ್ಟಿರುತ್ತವೆ ಎಂದಿದೆ. ಜತೆಗೆ ಆಯೋಗದ ನಿರ್ಧಾರವು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

Latest Indian news

Popular Stories