ಗೌರಿ-ಗಣೇಶ ಹಬ್ಬಕ್ಕೆ ಹೂವು,ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಗೌರಿ-ಗಣೇಶ ಹಬ್ಬಕ್ಕೂ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಇದರ ಪರಿಣಾಮ ತರಕಾರಿ, ಹೂವು, ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ.
ಮಾರುಕಟ್ಟೆಗಳಲ್ಲಿ ಮಲ್ಲಿಗೆ ಹೂವು, ಕನಕಾಂಬರ, ಸೇಬು ಹಣ್ಣು ಸೇರಿದಂತೆ ಹಲವು ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಮಲ್ಲಿಗೆ ಹೂವು 1 ಕೆಜಿಗೆ 550 ರೂ.ನಿಂದ 600 ರೂ. ರೂ.ವರೆಗೆ ಏರಿಕೆಯಾದರೆ, ಕನಕಾಂಬರ ಹೂವು ಕೆಜಿಗೆ 3000 ರೂ.ವರೆಗೂ ಏರಿಕೆ ಕಂಡಿದೆ. ಗುಲಾಬಿ -ಕೆಜಿಗೆ 200-250 ರೂ, ಸೇವಂತಿಗೆ ಕೆಜಿಗೆ 180-200 ರೂ.ಸುಗಂಧರಾಜ ಕೆಜಿಗೆ 240-250 ರೂ. ಚೆಂಡು ಹೂವು ಕೆಜಿಗೆ 170-180 ರೂ.ವರೆಗೆ ಏರಿಕೆಯಾಗಿದೆ.

ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, 1 ಕೆಜಿ ಸೇಬು ಹಣ್ಣು 100-120 ರೂ. ಇದ್ದರೆ ದಾಳಿಂಬೆ 160 ರೂ, ಮೂಸಂಬಿ ಕೆಜಿಗೆ 60-80 ರೂ.ಏಲಕ್ಕಿ ಬಾಳೆ – ಕೆಜಿಗೆ 120 ರೂ.ಸೀತಾಫಲ- ಕೆಜಿಗೆ 100 ರೂ. ದ್ರಾಕ್ಷಿ- ಕೆಜಿಗೆ 120- 200 ರೂ.ಅನಾನಸ್- ಎರಡಕ್ಕೆ 100-120 ರೂ. ಸಪೋಟ ಹಣ್ಣು 80-100 ರೂ.ವರೆಗೂ ಏರಿಕೆ ಕಂಡಿದೆ.

ಬಾಳೆಕಂದು- ಜೋಡಿಗೆ 60 ರೂ. ಮಾವಿನ ತೋರಣ- 20 ರೂ. ಗರಿಕೆ-ಕಟ್ಟಿಗೆ 30 ರೂ. ಬಿಲ್ವಪತ್ರೆ- 20ರೂ. ಎಕ್ಕದಹಾರ- 50 ರಿಂದ 60 ರೂ.ವರೆಗೂ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

Latest Indian news

Popular Stories