ರಾಜ್ಯ ಸರ್ಕಾರಕ್ಕೆ ರೈತರಿಗೆ ಅನುಕೂಲ ಮಾಡುವ ಉದ್ದೇಶ ಇದ್ದರೆ, ಸಾಲ ಮನ್ನಾ ಮಾಡಿ: ಬೊಮ್ಮಾಯಿ ಆಗ್ರಹ

ಹಾವೇರಿ: ರಾಜ್ಯ ಸರಕಾರ ಕೇಂದ್ರ‌ ಸರಕಾರ ನೀಡಿದ ಬರ ಪರಿಹಾರದಲ್ಲಿ 2 ಸಾವಿರ ರೂ. ಕಡಿತ ಮಾಡಿ ನೀಡುತ್ತಿದ್ದು, ಬರ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿ ರೈತರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬರ ಪರಿಹಾರವಾಗಿ ಕೊಟ್ಟಿದ್ದೆ ಜುಜಬಿ 2 ಸಾವಿರ, ಈಗ ಅದನ್ನೇ ಕಟ್ ಮಾಡಿ ರೈತರ ಖಾತೆಗೆ ಹಣ ನೀಡುತ್ತಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಪರಿಹಾರ ನೀಡಿರುವ ಹಣವನ್ನು ರೈತರ ಸಾಲಕ್ಕೆ ಹೊಂದಾಣಿಕೆ ಮಾಡುತ್ತಿದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಪರಿಹಾರ ನೀಡುವುದು‌. ಅದನ್ನು ಸಾಲಕ್ಕೆ ಹೊಂದಾಣಿಕೆ ಮಾಡಿದರೆ, ಅದು ಹೇಗೆ ಪರಿಹಾರವಾಗುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರಕ್ಕೆ ರೈತರಿಗೆ ಸಹಾಯ ಮಾಡುವ ಮನಸಿದ್ದರೆ, ಕಾಂಗ್ರೆಸ್ ಚುನಾವಣಾ ಘೋಷಣಾ ಪತ್ರದಲ್ಲಿ ಹೇಳಿರುವಂತೆ ರೈತರ ಸಾಲ ಮನ್ನಾ ಮಾಡಲಿ, ಕಾಂಗ್ರೆಸ್ ಘೋಷಣಾ ಪತ್ರ ಕರ್ನಾಟಕದಿಂದ ಪ್ರಾರಂಭವಾಗಲಿ ಎಂದು ಆಗ್ರಹಿಸಿದರು.

ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ನೀಡಿದ್ದೇವು. ಇವರು ಪರಿಹಾರವಾಗಿ ಕೊಟ್ಟಿರುವುದೇ ಜುಜುಬಿ ಎರಡು ಸಾವಿರ ರೂಪಾಯಿ, ಅದನ್ನೂ ಕಡಿತಗೊಳಿಸಿ ರೈತರಿಗೆ ನೀಡುತ್ತಿರುವುದು ಘೋರ ಅನ್ಯಾಯ, ಇದನ್ನು ರಾಜ್ಯ ಸರ್ಕಾರ ತಕ್ಷಣವೇ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Latest Indian news

Popular Stories