ರಾಜ್ಯ ಸರ್ಕಾರದಿಂದ `ಹೊಂಬೆಳಕು’ ಯೋಜನೆ ಜಾರಿ : ಗ್ರಾ.ಪಂಗಳಲ್ಲಿ ಸೋಲಾರ್ ಬೀದಿ ದೀಪಗಳ ಅಳವಡಿಕೆ

ಬೆಂಗಳೂರು: ರಾಜ್ಯ ಸರ್ಕಾರವು ಮತ್ತೊಂದು ಯೋಜನೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯಡಿ ಗ್ರಾಮಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ.

ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್‌ ವೆಚ್ಚ ಕಡಿಮೆ ಮಾಡಲು ರಾಜ್ಯದ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸುವ “ಹೊಂಬೆಳಕು” ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದಂತೆ “ಹೊಂಬೆಳಕು” ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇದರ ಅನುಷ್ಠಾನಕ್ಕಾಗಿ ₹25 ಕೋಟಿ ವೆಚ್ಚ ಮಾಡಲಾಗುವುದು. ಸೌರ ಬೀದಿ ದೀಪಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಬಳಕೆಯಾಗದಿರುವುದರಿಂದ ಗ್ರಾಮ ಪಂಚಾಯತಿಗಳಿಗೆ ವಿದ್ಯುತ್‌ ವೆಚ್ಚದ ಹೊರೆ ಕಡಿಮೆಯಾಗಲಿದೆ ಎಂದರು.

ಈ ಸೌರ ಬೀದಿದೀಪಗಳು ಎಲ್.ಇ.ಡಿ ತಂತ್ರಜ್ಞಾನವನ್ನು ಹೊಂದಿದ್ದು, ದೀರ್ಘ ಕಾಲ ಬಾಳಿಕೆಯ ನಿರೀಕ್ಷೆ ಇದೆ. ಈ ವರ್ಷ ಸುಮಾರು 16,500 ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಗ್ರಾಮೀಣ ಜನರು ಪ್ರಖರ ಬೆಳಕನ್ನು ಪಡೆಯುವುದರೊಂದಿಗೆ ವಿದ್ಯುತ್‌ ವೆಚ್ಚದ ಮಿತವ್ಯಯದಿಂದ ಗ್ರಾಮ ಪಂಚಾಯತಿಗಳ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ

Latest Indian news

Popular Stories