ಬೆಂಗಳೂರು: ಡೆಂಗಿ ನಿರ್ವಹಣೆಗೆ ಆರೋಗ್ಯ ಇಲಾಖೆಯು ಸರ್ವಸನ್ನದ್ಧವಾಗಿದ್ದು ಪ್ರಕರಣಗಳ ನಿರ್ವಹಣೆಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಡೆಂಗಿ ನಿಯಂತ್ರಣ ಸಂಬಂಧ ವಿಧಾನಸೌಧದಲ್ಲಿ ಬಿಬಿಎಂಪಿ ಹಾಗು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ರಾಜ್ಯದಲ್ಲಿ ಈವರೆಗೆ ಒಟ್ಟು 6187 ಡೆಂಗಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 6 ಜನರು ಸಾವಿಗೀಡಾಗಿದ್ದಾರೆ. ಕಳೆದಬಾರಿಗೆ ಹೋಲಿಸಿದರೆ ಈ ಬಾರಿ ಡೆಂಗಿ ಟೆಸ್ಟಿಂಗ್ ಶೇ. 40% ರಷ್ಟು ಹೆಚ್ಚಿಸಿದ್ದೇವೆ. ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹಚ್ಚಿದಾಗ ಮಾತ್ರ ಸಾವುಗಳನ್ನು ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಲದೇ ಡೆಂಗಿ ಬಗ್ಗೆ ಅರಿವು ಮೂಡಿಸಲು ಮನೆ ಮನೆಗೆ ತೆರಳಿ ಡೆಂಗಿ ಹರಡುವ ಈಡಿಸ್ ಸೊಳ್ಳೆ ಲಾರ್ವ ನಾಶಪಡಿಸುವ ಹಾಗು ನಿಯಮಿತ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಡೆಂಗಿ ಕುರಿತು ಜನರಲ್ಲಿ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.