ಬೆಂಗಳೂರು: ರಾಜ್ಯದಲ್ಲಿ ಸೆರೆಹಿಡಿಯಲಾದ ಆನೆಯಿಂದ ಕೊಲ್ಲಲ್ಪಟ್ಟ ಕೇರಳದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರವು ಪರಿಹಾರವಾಗಿ ₹15 ಲಕ್ಷವನ್ನು ಮಂಜೂರು ಮಾಡಿದ್ದಕ್ಕೆ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ.
ಹಣ ಬಿಡುಗಡೆ ಮಾಡಿರುವುದರ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ‘ಕನ್ನಡಿಗರ ತೆರಿಗೆ ಹಣವನ್ನ ಕೇರಳ ಸಂಸದರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಅಣತಿಯಂತೆ ಬಿಡುಗಡೆ ಮಾಡಲು ಕರ್ನಾಟಕವೇನು ಕಾಂಗ್ರೆಸ್ ಪಕ್ಷದ ಆಸ್ತಿ ಅಂದುಕೊಂಡಿದ್ದೀರಾ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡಿಗರ ತೆರಿಗೆ ರಾಹುಲ್ ಗಾಂಧಿ ಜೇಬಿಗೆ ಎಂದು ಕುಟುಕಿದ ಅಶೋಕ್, ಸಿಎಂ ಸಿದ್ದರಾಮಯ್ಯನವರೇ, ಇದು ‘ನಮ್ಮ ತೆರಿಗೆ, ನಮ್ಮ ಹಕ್ಕು’ ಅಂತ ನಿಮ್ಮ ಪಕ್ಷದ ಹೈಕಮಾಂಡ್ ನಾಯಕರ ಬಳಿ ‘ಧೈರ್ಯವಾಗಿ ಪ್ರಶ್ನಿಸಲು’ ನಿಮ್ಮ ಸಚಿವರಿಗೆ ತಾಕತ್ತಿಲ್ಲವೇ? ಎಂದು ಗುಡುಗಿದ್ದಾರೆ.