ಕೆಂಗಲ್ ಆಂಜನೇಯ ಸ್ವಾಮಿಯ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿಸಿಎಂ ಡಿಕೆಶಿ

ಚನ್ನಪಟ್ಟಣ : ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿದ್ದು ಚನ್ನಪಟ್ಟಣದಿಂದ. ಈಗ ಇಲ್ಲಿನ ಕೆಂಗಲ್ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ರಾಮನ ಭಂಟ ಆಂಜನೇಯ ಸೇವೆಯ ಪ್ರತೀಕ. ಅದೇ ರೀತಿ ನಾನು ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಬಂದಿದ್ದೇನೆ. ಅತಿ ಚಿಕ್ಕ ವಯಸ್ಸಿಗೆ ಬಂಗಾರಪ್ಪ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದು ನಿಮ್ಮ ಆಶೀರ್ವಾದದಿಂದ. ಚನ್ನಪಟ್ಡಣದ ಮಹಾಜನತೆಯ ಆಶೀರ್ವಾದ ನಮಗೆ ಬೇಕಾಗಿದೆ. ಜನರು ಪಕ್ಷಬೇಧವನ್ನು ಮರೆತು ಸರ್ಕಾರದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನನ್ನ ಅಧಿಕಾರವನ್ನು ಚನ್ನಪಟ್ಟಣದ ಬದಲಾವಣೆಗೆ ಉಪಯೋಗಿಸಿಕೊಳ್ಳಬೇಕು

ನನ್ನ ತಮ್ಮ ಡಿ.ಕೆ.ಸುರೇಶ್ ಗೆ ಸೋಲಾಗಿದೆ ಎಂದರೆ ನನ್ನಲ್ಲೇ ಏನೂ ನ್ಯೂನ್ಯತೆ ಇದೆ ಎಂದು ಕ್ಷೇತ್ರದ ಜನ ಅರ್ಥ ಮಾಡಿಸಿದ್ದಾರೆ. ನನಗೆ ಬುದ್ಧಿವಾದ ಹೇಳಲು ಜನರು ಈ ತೀರ್ಮಾನ ನೀಡಿದ್ದಾರೆ. ಇದನ್ನು ನಾನು ಅರಿತುಕೊಂಡಿದ್ದೇನೆ. ಈ ವಿಚಾರದಲ್ಲಿ ನಾನು ಯಾರನ್ನೂ ದೂಷಣೆ ಮಾಡಲು ಹೋಗುವುದಿಲ್ಲ. ಗೆದ್ದಿರುವ ವ್ಯಕ್ತಿ ತುಂಬು ಹೃದಯದಿಂದ ಸುರೇಶ್ ಗಿಂತ ಹೆಚ್ಚಿನ ಜನರ ಸೇವೆ ಮಾಡಲಿ ಎಂದು ಶುಭ ಕೋರುತ್ತೇನೆ.

ನಾನು ಧೈರ್ಯ ಕಳೆದುಕೊಳ್ಳುವವನು, ಹೆದರಿ ಓಡಿ ಹೋಗುವವನಲ್ಲ. ಹೋರಾಟ ಮಾಡುವವನು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಭಕ್ತಿ ಇರುವ ಕಡೆ ಭಗವಂತ ಇದ್ದಾನೆ. ಪ್ರತಿ ಪಂಚಾಯ್ತಿಗೂ ಭೇಟಿ ನೀಡಿ ಚನ್ನಪಟ್ಟಣದ ಬದಲಾವಣೆಗೆ ನನಗೆ ಇರುವ ಶಕ್ತಿಯಲ್ಲಿ ಪ್ರಯತ್ನಿಸುತ್ತೇನೆ.

ಸರ್ಕಾರದಲ್ಲಿ ನಾನು ಉತ್ತಮ ಸ್ಥಾನದಲ್ಲಿದ್ದು ಚನ್ನಪಟ್ಟಣದ ಅಭಿವೃದ್ದಿಗೆ ರೂಪುರೇಷೆಯನ್ನು ಸಿದ್ದಪಡಿಸಿದ್ದೇನೆ. ಭೂಮಿ ಋಣ, ತಾಯಿ ಋಣ, ಅನ್ನದ ಋಣ, ಜನರ ಋಣ ತೀರಿಸ ಬೇಕಾಗಿರುವುದು ನಮ್ಮ ಕರ್ತವ್ಯ. ಈಗ ಮತ್ತೊಮ್ಮೆ ನಿಮ್ಮ ಋಣ ತೀರಿಸುವ ಅವಕಾಶ ದೊರೆತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿಯಿದ್ದು ಮುಂದಿನ ದಿನಗಳಲ್ಲಿ ಯಾರು ಅಭ್ಯರ್ಥಿ ಎಂಬುದನ್ನು ತಿಳಿಸುತ್ತೇನೆ.

Latest Indian news

Popular Stories