ವೈಫಲ್ಯಗಳನ್ನು ಮುಚ್ಚಿಹಾಕಲು ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಹೊಸ ನಾಟಕ: ಬಿ.ವೈ.ವಿಜಯೇಂದ್ರ

ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಅಭಿವೃದ್ಧಿಶೂನ್ಯ ಸರಕಾರವನ್ನು ನಾವು ನೋಡುತ್ತಿದ್ದೇವೆ; ಇದು ನಿಜಕ್ಕೂ ದುರದೃಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಹೊಸ ನಾಟಕವನ್ನು ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಿದರು.

ನನ್ನ ತೆರಿಗೆ ನನ್ನ ಹಕ್ಕು’ ಎಂಬ ಘೋಷಣೆಯೊಂದಿಗೆ ಹೊರಟ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರಕಾರವು ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿಜೀ ಅವರು ಕೊಟ್ಟ ಕೊಡುಗೆಗಳು, ಯೋಜನೆಗಳನ್ನು ಒಂದು ಸಲ ಮೆಲುಕು ಹಾಕಿ ನೋಡಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ- ಮುಖಂಡರು ಸಾಕಷ್ಟು ಭರವಸೆಗಳನ್ನು ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದರು. ಅಭೂತಪೂರ್ವ ಬೆಂಬಲದೊಂದಿಗೆ ಸರಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿ ರಾಜ್ಯದ ಜನರಲ್ಲಿ ಅಪೇಕ್ಷೆ, ನಿರೀಕ್ಷೆಗಳು ಸಾಕಷ್ಟಿದ್ದವು. ಆದರೆ, ಅವೆಲ್ಲವೂ ಮಣ್ಣುಪಾಲಾಗಿದೆ. ಮತದಾರರಲ್ಲಿ ತಾವು ಮೋಸಹೋಗಿದ್ದೇವೆ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಒಂದು ಸುಳ್ಳನ್ನು ನೂರು ಬಾರಿ ಹೇಳಿ ವಿಧಾನಸಭಾ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದರೋ, ಈಗ ಅದೇರೀತಿ ‘ನನ್ನ ತೆರಿಗೆ ನನ್ನ ಹಕ್ಕು’ ಮೂಲಕ ಅದೇ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಸತ್ಯ ಸಂಗತಿಗಳನ್ನು ರಾಜ್ಯದ ಜನರ ಮುಂದೆ ಇಡಲಿದ್ದೇವೆ ಎಂದು ತಿಳಿಸಿದರು.

Latest Indian news

Popular Stories