POCSO; ಯಡಿಯೂರಪ್ಪ ವಿರುದ್ಧದ ಚಾರ್ಜ್‌ಶೀಟ್‌ಗೆ ಮತ್ತೊಮ್ಮೆ ಕೋರ್ಟ್ ನಿಂದ ಸಮನ್ಸ್ ಜಾರಿ

ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳಿಗೆ ಮಾರ್ಚ್ 15 ರಂದು ಹಾಜರಾಗುವಂತೆ ವಿಶೇಷ ನ್ಯಾಯಾಲಯ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
82 ವರ್ಷದ ಯಡಿಯೂರಪ್ಪ ವಿರುದ್ಧ ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ಪೋಕ್ಸೊ ಕಾಯ್ದೆಯಡಿ ದಾಖಲಿಸಲಾದ ಪ್ರಕರಣಗಳನ್ನು ನಿರ್ವಹಿಸುತ್ತಿರುವ ನ್ಯಾಯಾಲಯವು ಹೊಸದಾಗಿ ವಿಚಾರಣೆಗೆ ಒಳಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಿಐಡಿಯ ಅಂತಿಮ ವರದಿಯನ್ನು ಹೊಸದಾಗಿ ಪರಿಗಣಿಸಿ ಸೂಕ್ತ ಆದೇಶಗಳನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಫೆಬ್ರವರಿ 7 ರಂದು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಪೋಕ್ಸೊ ಕಾಯ್ದೆಯಡಿ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್, ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿ ಆದೇಶ ಹೊರಡಿಸಿ ನಿರೀಕ್ಷಣಾ ಜಾಮೀನು ಕೂಡ ನೀಡಿತ್ತು.
ಕಳೆದ ವರ್ಷ ಫೆಬ್ರವರಿ 2 ರಂದು ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಅವರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 17 ವರ್ಷದ ಅಪ್ರಾಪ್ತ ವಯಸ್ಕಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಳೆದ ವರ್ಷ ಮಾರ್ಚ್ 14 ರಂದು ಪ್ರಕರಣ ದಾಖಲಾಗಿತ್ತು.
ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳು, ದೂರುದಾರರಿಗೆ ಮತ್ತು ಅವರ ಅಪ್ರಾಪ್ತ ಮಗಳಿಗೆ ಪ್ರಕರಣದಿಂದ ದೂರ ಸರಿದು ಸುಮ್ಮನಿರುವಂತೆ ಹೇಳಿ ಹಣ ಪಾವತಿಸಿದ್ದಾರೆ ಎಂದು ಆರೋಪಿಸಿ ಸಿಐಡಿ ಜೂನ್ 27 ರಂದು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದೆ.