ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದನ್ನು ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿರುವ ಹೈಕೋರ್ಟ್, ‘ವ್ಯಕ್ತಿಗೆ ಮಾನ ಎಷ್ಟು ಮುಖ್ಯವೋ ರಾಜಕೀಯ ಪಕ್ಷಗಳಿಗೂ ಅಷ್ಟೇ ಮುಖ್ಯ’ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.
ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ವಜಾಗೊಳಿಸಿದ್ದಾರೆ
ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 499 ಮತ್ತು 500ರಲ್ಲಿ ‘ಯಾರೇ ಇರಲಿ’ ಎಂಬ ಪದವು ಸೂಚ್ಯವಾಗಿ ಸಂಘವನ್ನೂ ವ್ಯಕ್ತಿ ಎಂದೇ ವಿಶಾಲ ಅರ್ಥದಲ್ಲಿ ಒಳಗೆಳೆದುಕೊಂಡು ಗಮನಿಸುತ್ತದೆ. ಅಂತೆಯೇ, ಸಾಮಾನ್ಯ ವ್ಯಾಖ್ಯಾನ ಅಧಿನಿಯಮ-1897ರ ಅಡಿಯಲ್ಲೂ ರಾಜಕೀಯ ಪಕ್ಷಗಳನ್ನು ಕಾನೂನು ವ್ಯಕ್ತಿ ಎಂದೇ ಅರ್ಥೈಸಲಾಗುತ್ತದೆ. ಇಂತಹ ಕಾನೂನು ವ್ಯಕ್ತಿ ಎಂಬ ಪದದ ವ್ಯಾಪ್ತಿಗೆ ಸರ್ಕಾರಗಳು, ಕಂಪನಿಗಳು, ದೈವತಗಳು, ಕಾರ್ಮಿಕ ಸಂಘಗಳು ಸೇರ್ಪಡೆಯಾಗುತ್ತವೆ ಎಂದು ನ್ಯಾಯಪೀಠ ವಿವರಿಸಿದೆ.