ಬೆಂಗಳೂರು: ಕೃಷಿ ಸಾಲ ಮನ್ನಾ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ರಾಜಧಾನಿ ದೆಹಲಿಯಲ್ಲಿ ಭಾರೀ ಹೋರಾಟ ನಡೆಸಲು ಮುಂದಾಗಿರುವ, ಹಾಗೂ ‘ಭಾರತ್ ಬಂದ್’ಗೆ ಕರೆ ನೀಡಿರುವ ರೈತರ ಬಗ್ಗೆ ಅನುಕಂಪ ಇದೆ ಆದರೆ ಹೋರಾಟದ ಸಂದರ್ಭ ಹಾಗೂ ವೈಖರಿಯನ್ನು ಒಪ್ಪಲಾಗದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ರೈತ ಸಂಘಟನೆಗಳ ಬೆಂಬಲದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾವು ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದು ಉತ್ತರ ಭಾರತದಲ್ಲಿ ರೈತರು ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ. ದೆಹಲಿಯಲ್ಲಿನ ಹೋರಾಟಕ್ಕೆ ಧಾವಿಸುವ ಸನ್ನಿವೇಶದಿಂದಾಗಿ ಅಲ್ಲಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿವೆ. ಇದರಿಂದಾಗಿ ಸಾರ್ವಜನಿಕರು ಹಾಗೂ ಶ್ರಮಿಕವರ್ಗ ಸಂಕಷ್ಟದಲ್ಲಿ ಸಿಲುಕಿದ್ದು, ಇದು ಇಂತಹಾ ಹೋರಾಟಕ್ಕೆ ಸೂಕ್ತ ಸಮಯವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ನಡುವೆ ಫೆಬ್ರವರಿ 16 ರಂದು ‘ಭಾರತ್ ಬಂದ್’ ಕರೆ ನೀಡಲಾಗಿದ್ದು, ಈ ಕರೆಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಗೊಂಡಿದ್ದಾರೆ. ಇದು ಶೈಕ್ಷಣಿಕ ವರ್ಷಾಅಂತ್ಯದ ಪರೀಕ್ಷಾ ಸಂದರ್ಭವಾಗಿದೆ. ಹೋರಾಟ ನ್ಯಾಯಯುತವಾಗಿದ್ದರೂ ಯುವಜನರ ಭವಿಷ್ಯದ ವಿಚಾರವನ್ನು ಗಮನಿಸಿದರೆ, ಪ್ರಸಕ್ತ ಪರಿಸ್ಥಿತಿಯು ಬಂದ್ ಕರೆಗೆ ಸೂಕ್ತ ಕಾಲವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ
ಕೇಂದ್ರ ಟ್ರೇಡ್ ಯೂನಿಯನ್‌ಗಳು (CTUs) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಲು ಫೆಬ್ರವರಿ 16 ರಂದು ರಾಷ್ಟ್ರವ್ಯಾಪಿ ಬಂದ್ ಮತ್ತು ರೈಲು ಮತ್ತು ರಸ್ತೆ ತಡೆಗೆ ಕರೆ ನೀಡಿವೆ. ಅದರಲ್ಲೂ ‘ಭಾರತ್ ಬಂದ್’ ಬಗ್ಗೆ ಎಲ್ಲರಲ್ಲೂ ಆತಂಕ ಮನೆಮಾಡಿದಂತಿದೆ. ಈ ಬಂದ್ ಕರೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಲಾಗದು ಎಂದು ಅನೇಕರು ಹೇಳಿದ್ದಾರೆ. ಸಂಘಗಳ ಪ್ರತಿಭಟನೆಯ ಹಕ್ಕನ್ನು ನಾವೂ ಪ್ರತಿಪಾದಿಸುತ್ತೇವೆ, ಆದರೆ ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿಗಳ ಸ್ಥಿತಿಯನ್ನೂ ನಾವೂ ಅರ್ಥಮಾಡಿಕೊಳ್ಳಬೇಕಿದೆ. ಈ ಬಗ್ಗೆ ರೈತ ಸಂಘಟನೆಗಳ ನಾಯಕರೂ ಅರ್ಥ ಮಾಡಿಕೊಳಬೇಕಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.