ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಮೇಶ್ವರಂ ಕೆಫೆಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ಕೆಫೆಯ ಸ್ಥಳ ಮಹಜರು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ವರಂ ಕೆಫೆಯಲ್ಲಿ ಎನ್‌ಐ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಯುತ್ತಿದ್ದು, ಕ್ಯಾಶ್ ಕೌಂಟರ್, ಘಟನೆ ನಡೆದ ಸ್ಥಳ, ಸಿಸಿಟಿವಿ ಕ್ಯಾಮರಾ ಪರಿಶೀಲನೆ ಸೇರಿದಂತೆ ಘಟನೆ ಕುರಿತಂತೆ ಕೆಫೆಯ ಸಿಬ್ಬಂದಿಗಳಿಂದ ಮಾಹಿತಿಯನ್ನು NIA ಅಧಿಕಾರಿಗಳು ಪಡೆದುಕೊಂಡರು. NIA ಎ.ಎಸ್.ಪಿ ಸೇರಿದನೇ ಮೂವರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಕುಂದಲಹಳ್ಳಿಯ ಗೇಟ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಘಟನೆ ಜರುಗಿತ್ತು.ಈ ಘಟನೆಯಲ್ಲಿ 10 ಜನರು ಗಾಯಗೊಂಡಿದ್ದರು. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಶಂಕಿತ ಉಗ್ರನ ಕುರಿತಾಗಿ ಇದುವರೆಗೂ 8 ತಂಡಗಳನ್ನು ರಚಿಸಿದ್ದು, ಈಗಾಗಲೇ ಆತನ ಹುಡುಕಾಟಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಘಟನೆಯ ನಂತರ ಶಂಕಿತ ಉಗ್ರ ಪಕ್ಕದ ತಮಿಳುನಾಡು ಕೇರಳ ಅಥವಾ ಆಂಧ್ರಕ್ಕೆ ತೆರಳಿರಬಹುದು ಎಂದು ಹೇಳಲಾಗುತ್ತಿದ್ದು, ಈಗಾಗಲೇ ಕೇಂದ್ರ ತನಿಖಾ ತಂಡಗಳು ಹಾಗೂ ರಾಜ್ಯ ಪೊಲೀಸರಿಂದಲೂ ಆರೋಪಿಯ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.