ಬೆಂಗಳೂರು, ಆಗಸ್ಟ್ 14: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಟರ್ಮಿನಲ್ 2 ಲೋಕಾರ್ಪಣೆ ಬಳಿಕ ತನ್ನದೇ ಆದ ಹೆಗ್ಗುರುತು ಮೂಡಿಸಿದೆ. ದೇವನಹಳ್ಳಿಯಲ್ಲಿರುವ ಏರ್‌ಪೋರ್ಟ್ ತನ್ನ ಸೇವೆಯಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಇಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆ ವೇಳೆ ನಡೆದುಕೊಳ್ಳುತ್ತಿರುವ ರೀತಿಯಿಂದ ಸುದ್ದಿಯಾಗಿದೆ.
ಪ್ರಯಾಣಿಕರೊಬ್ಬರು ಇಲ್ಲಿನ ಅನೈರ್ಮಲ್ಯವನ್ನು ಖಂಡಿಸಿದ್ದು, ಹೆಚ್ಚು ವೈರಲ್ ಆಗುತ್ತಿದೆ.
ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣ ಮಾಡಿದ್ದ ಮ್ಯಾಗ್ನಿಫ್ಲೆಕ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆನಂದ್ ನಿಚಾನಿ ಅವರು ಕೆಇಎ ಸಿಬ್ಬಂದಿ ನಡೆಸುವ ಭದ್ರತಾ ತಪಾಸಣೆ ವೇಳೆ ಇರುಸು ಮುರುಸು ಅನುಭವಿಸಿದ್ದಾರೆ. ಕಾರಣ ಪ್ರಯಾಣಿಕರು, ಅವರ ಬ್ಯಾಗ್, ಇನ್ನಿತರ ವಸ್ತು ಪರಿಶೀಲನೆ ವೇಳೆ ಕಂಡು ಬಂದ ಅನೈರ್ಮಲ್ಯದ ಸ್ಥಿತಿ ಎಂದು ಅವರು ಸಾಮಾಜಿಕ ಜಾಲತಾಣ (ಎಕ್ಸ್) ದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಅವರು ತಮ್ಮ ಟ್ವೀಟ್ ಪೋಸ್ಟ್ ಅನ್ನು @BLRAirport ಎಕ್ಸ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಿದ್ದಾರೆ.
ಹೌದು, ಕೆಇಎ ಆವರಣದಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವಾಗ ಬ್ಯಾಗ್ ಸೇರಿದಂತೆ ವಾಚ್, ಬೆಲ್ಟ್, ಲಾಪ್‌ಟಾಪ್, ಮೊಬೈಲ್ ಇನ್ನಿತರ ಪ್ರಯಾಣಿಕರ ವಸ್ತುಗಳನ್ನು ಟ್ರೇನಲ್ಲಿ ಇಟ್ಟು ಚೆಕ್ಕಿಂಗ್, ಸ್ಕ್ಯಾನಿಂಗ್ ಮಾಡಲಾಗುತ್ತದೆ. ಆದರೆ ಈ ವೇಳೆ ಪ್ರಯಾಣಿಕರ ಶೂಗಳು ಇಡಲು ಅದೇ ಟ್ರೇ ಬಳಸಿ, ನಂತರ ಇತರ ವಸ್ತುಗಳು ಇಡಲು ಅದೇ ಟ್ರೇಗಳನ್ನು ನೀಡಲಾಗುತ್ತಿದೆ. ಇದು ಅನೈರ್ಮಲ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.