ಇಂದು ಮಧ್ಯಾಹ್ನದ ವೇಳೆಗೆ ರೇವಣ್ಣ ರಿಲೀಸ್; ಜೈಲಿನ ಬಳಿ ಪೊಲೀಸ್ ಬಿಗಿ ಭದ್ರತೆ

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ರೇವಣ್ಣ ರಿಲೀಸ್ ಆಗಲಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಲವು ಷರತ್ತುಗಳನ್ನ ವಿಧಿಸಿ ಬೇಲ್ ಮಂಜೂರು ಮಾಡಿದೆ. ಜಾಮೀನಿಗೆ ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್, ಸಾಕ್ಷಿ ನಾಶಕ್ಕೆ ಮುಂದಾಗಬಾರದು, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ಹೋಗಬಾರದು, ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು, ಎಸ್‌ಐಟಿ ತನಿಖೆಗೆ ಸಹಕರಿಸಬೇಕು ಅನ್ನೋ ಷರತ್ತುಗಳನ್ನ ವಿಧಿಸಿದೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ರೇವಣ್ಣ ಬಿಡುಗಡೆ ಆಗಲಿದ್ದಾರೆ

ಇಂದು ಎಚ್​.ಡಿ ರೇವಣ್ಣ ‌ಜೈಲಿನಿಂದ ಬಿಡುಗಡೆ ಹಿನ್ನೆಲೆ ಜೈಲು ಬಳಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಾಗಿ ಸೇರುವ‌ ಸಾಧ್ಯತೆ ಇದೆ. ಹೀಗಾಗಿ ಜೈಲಿನ ರಸ್ತೆಯಲ್ಲಿ ಡಿಸಿಪಿ‌ ನೇತೃತ್ವದಲ್ಲಿ ‌ಬಿಗಿ ಭದ್ರತೆ ಏರ್ಪಡಿಸಲಾಗಿದೆ. 3 ಜನ ಎಸಿಪಿ, 6 ಜನ ಇನ್​​ಸ್ಪೆಕ್ಟರ್​, 20 ಜನ‌ ಸಬ್​​ ಇನ್​​ಸ್ಪೆಕ್ಟರ್​ ಸೇರಿ 250 ಸಿಬ್ಬಂದಿ ನಿಯೋಜಿಸಲಾಗಿದೆ.

ರೇವಣ್ಣಗೆ ಜಾಮೀನು ಮಂಜೂರಾಗ್ತಿದ್ದಂತೆ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತ್ತು. ಪರಪ್ಪನ ಅಗ್ರಹಾರ ಜೈಲಿನ ಬಳಿ ಜಮಾಯಿಸಿದ ರೇವಣ್ಣ ಆಪ್ತರು ಹಾಗೂ ಜೆಡಿಎಸ್ ಕಾರ್ಯಕರ್ತರು ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದ್ರು.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲೂ ರೇವಣ್ಣ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಗಾಂಧಿ ವೃತ್ತದಲ್ಲಿ ರೇವಣ್ಣ ಬೆಂಬಲಿಗರ ಸಂಭ್ರಮಾಚರಣೆ ವೇಳೆ ಹೈಡ್ರಾಮಾ ನಡೆದಿದೆ.

ಸಂಭ್ರಮಾಚರಣೆಗೆ ನಡೆಸ್ತಿದ್ದ ರೇವಣ್ಣ ಬೆಂಬಲಿಗರು, ಪೊಲೀಸರ ಜೊತೆ ವಾಗ್ವಾದ ನಡೆಯಿತು. ಪೊಲೀಸರ ಕಣ್ತಪ್ಪಿಸಿ ಪಟಾಕಿ ಹೊಡೆಯಲು ಯತ್ನಿಸ್ತಿದ್ದವರನ್ನ ನಿಯಂತ್ರಿಸಲು ಪೊಲೀಸರ ಹರ ಸಾಹಸಪಟ್ರು. ಇನ್ನು ಘಟನೆ ಹಿನ್ನೆಲೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿದ್ದು, ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ.

Latest Indian news

Popular Stories