ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ:ಹೊಸ ಪದಾಧಿಕಾರಿಗಳೊಂದಿಗೆ ಹುಮ್ಮಸ್ಸಿನಿಂದ ಸಂಘಟನೆಗೆ ಚಿಂತನೆ

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿಗೆ ಸರ್ಜರಿ ಮಾಡಲು ಚಿಂತನೆ ನಡೆಸಲಾಗಿದೆ. ವರ್ಷಾಂತಕ್ಕೆ ಇಲ್ಲವೇ ಜನವರಿಯಲ್ಲಿ ರಾಜ್ಯ ಬಿಜೆಪಿಗೆ ಸರ್ಜರಿ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.

ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯ ಮೂಲಕ ಹೊಸ ಹುಮ್ಮಸ್ಸಿನೊಂದಿಗೆ ಪಕ್ಷ ಸಂಘಟನೆಗೆ ಚಿಂತನೆ ನಡೆಸಲಾಗಿದೆ.

ಬಿಜೆಪಿ ತೆಕ್ಕೆಯಲ್ಲಿದ್ದ ಶಿಗ್ಗಾವಿ ಕ್ಷೇತ್ರ ಕೈಬಿಟ್ಟಿದೆ. ಉಳಿದ ಎರಡು ಕ್ಷೇತ್ರಗಳಲ್ಲಿ ಎನ್.ಡಿ.ಎ. ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಕಂಗಲಾದ ರಾಜ್ಯ ನಾಯಕರು ಸೋಲಿನ ಪರಾಮರ್ಶೆಯನ್ನು ಗಂಭೀರವಾಗಿ ನಡೆಸಿದ್ದು, ಪಕ್ಷದಲ್ಲಿ ಆಗಬೇಕಿರುವ ಬದಲಾವಣೆ, ಸುಧಾರಣೆಗಳ ಕುರಿತಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ.

ಪಕ್ಷ ಮತ್ತು ಸ್ವಪಕ್ಷೀಯ ನಾಯಕರ ವಿರುದ್ಧ ನಿರಂತರವಾಗಿ ಹರಿಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವರಿಷ್ಠರೇ ಕ್ರಮ ಜರುಗಿಸುವ ಮೂಲಕ ಅತೃಪ್ತ ನಾಯಕರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ವಿಜಯೇಂದ್ರ ಆಪ್ತರಿಗೆ ಮತ್ತು ಕಿರಿಯರಿಗೆ ಹೆಚ್ಚು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಲಾಗುವುದು. ಪದಾಧಿಕಾರಿಗಳ ಪಟ್ಟಿಗೆ ಮೇಜರ್ ಸರ್ಜರಿ ನಡೆಸಲಿದ್ದು, ಸಮತೋಲನ ಕಾಯ್ದುಕೊಂಡು ಹಿರಿಯರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಸದ್ಯದಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿರುವ ಹಿನ್ನೆಲೆಯಲ್ಲಿ ಬದಲಾವಣೆಗೆ ಚಿಂತನೆ ನಡೆದಿದೆ. ಕೆಲವು ಪದಾಧಿಕಾರಿಗಳಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಹೊಸ ಕೋರ್ ಕಮಿಟಿ ರಚಿಸಲಾಗುವುದು. ಅನುಭವದ ಜೊತೆಗೆ ಜಾತಿ, ಪ್ರಾದೇಶಿಕ ಸಮತೋಲನಕ್ಕೆ ಒತ್ತು ನೀಡಲಾಗುವುದು. ಯತ್ನಾಳ್ ಟೀಂ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Latest Indian news

Popular Stories