ಸ್ಕೈವಾಕ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಪತ್ರ

ಬೆಂಗಳೂರು ಫೆಬ್ರವರಿ 12: ಬೆಂಗಳೂರು ದಕ್ಷಿಣದ ಸಾರ್ವಜನಿಕರು, ಬನಶಂಕರಿ ಪ್ರದೇಶದಲ್ಲಿರುವ ನಮ್ಮ ಮೆಟ್ರೋ & ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಾಣಕ್ಕೆ ಸಾರ್ವಜನಿಕರು ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಸ್ಕೈವಾಕ್ ನಿರ್ಮಾಣದಿಂದ ಪಾದಚಾರಿಗಳಿಗೆ, ಮೆಟ್ರೋ ಮತ್ತು ಬಸ್ ನಿಲ್ದಾಣಗಳ ಮುಖಾಂತರ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಶೀಘ್ರವೇ ಸ್ಕೈವಾಕ್ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸಿ, ತ್ವರಿತ ಕಾಮಗಾರಿ ಆರಂಭಿಸುವಂತೆ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಸದರು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲೇನಿದೆ?ಬೆಂಗಳೂರು ನಗರ ಸಂಚಾರದ ದೃಷ್ಟಿಯಿಂದ ಬಹುಮುಖ್ಯ ಪ್ರದೇಶವಾಗಿರುವ ಬನಶಂಕರಿಯಲ್ಲಿ ಬಿಬಿಎಂಪಿ ಬಸ್ ನಿಲ್ದಾಣ ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳ ನಡುವೆ ಬಹು ಆಯಾಮದ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಕೈವಾಕ್ ನಿರ್ಮಾಣಗೊಳಿಸಿ. ಇಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಕೋರಿ ನಾನು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ.

ಸಂಸದನಾಗಿ ಆಯ್ಕೆಯಾದ ನಂತರ 08.11.2019 ರಂದು ಬನಶಂಕರಿ ಮೆಟ್ರೋ ನಿಲ್ದಾಣ & ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಾಣದ ಸಾಧ್ಯತೆಗಳ ಕುರಿತು ಖುದ್ದು ಪರಿಶೀಲನೆ ನಡೆಸಿ, ನಂತರ 31.11.2019 ರಂದು ಸಂಬಂಧ ಪಟ್ಟ ಸ್ಮಾರ್ಟ್ ಸಿಟಿ ಮಿಷನ್, ಬಿಬಿಎಂಪಿ, ಬಿಎಂಆರ್‌ಸಿಎಲ್‌ ಅಧಿಕಾರಿಗಳೊಂದಿಗೆ ಸ್ಕೈವಾಕ್ ನಿರ್ಮಾಣದ ಅಗತ್ಯತೆ ಕುರಿತಾಗಿ ಸಭೆ ನಡೆಸಿದ್ದೇನೆ.ಈ ಪ್ರದೇಶದಲ್ಲಿ ಸ್ಕೈವಾಕ್ ಅಗತ್ಯತೆ, ಶೀಘ್ರ ಆರಂಭದ ಕುರಿತು ನಾನು 01.11.2023 ರಂದು ತಮಗೂ ಕೂಡ ಪತ್ರ ಬರೆದಿದ್ದು, ತಮ್ಮೊಂದಿಗೆ ಈ ಕಾಮಗಾರಿ ಆರಂಭದ ಕುರಿತು ಹಲವು ಬಾರಿ ದೂರವಾಣಿ ಕರೆ ಮೂಲಕವೂ ಮಾತನಾಡಿ ಶೀಘ್ರವೇ ಸ್ಕೈವಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ.

ಬನಶಂಕರಿ ಪ್ರದೇಶವು ನಗರ ಸಂಚಾರದ ದೃಷ್ಟಿಯಿಂದ ಬಹುಮುಖ್ಯ ಜಂಕ್ಷನ್ ಆಗಿದ್ದು, ಮೆಟ್ರೋ & ಬಿಬಿಎಂಪಿ ಬಸ್ ನಿಲ್ದಾಣಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಹುಮುಖ್ಯ ಸ್ಥಳವಾಗಿದೆ. ಪ್ರತಿನಿತ್ಯ ಈ ಮಾರ್ಗದಲ್ಲಿ ನನ್ನ ಕ್ಷೇತ್ರದ 50 ಸಾವಿರಕ್ಕೂ ಅಧಿಕ ಜನ ಪ್ರಯಾಣ ಮಾಡುತ್ತಿದ್ದು, ಗೊಂದಲ ಮೂಡಿಸುವ ಪಾದಚಾರಿ ರಸ್ತೆ, ಸಂಚಾರ ಮಾರ್ಗಗಳಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮೆಟ್ರೋ & ಬಸ್ ನಿಲ್ದಾಣಗಳ ನಡುವಿನ ಸ್ಕೈವಾಕ್ ನಿರ್ಮಾಣಕ್ಕೆ ಬಹುದಿನಗಳಿಂದ ಆಗ್ರಹವಿದ್ದು, ಅದಕಾರಣ ತಾವುಗಳು ಈ ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಈ ವರ್ಷದ ಬಿಬಿಎಂಪಿಯ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಿ, ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ

Latest Indian news

Popular Stories